ಮೈಸೂರು: ತಾಳಿ ಕಟ್ಟಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ವೇಳೆ ನಗರದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮಾಂಗಲ್ಯ ಕಟ್ಟುವ ಸಂದರ್ಭದಲ್ಲೇ ವಧು ನೋ.. ಎಂದು, ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆ ಮದುವೆ ಮಂಟಪದಲ್ಲಿ ಆತಂಕ ನಿರ್ಮಾಣ ಆಗಿದೆ. ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕ ಮಾಡಿ, ಪ್ರೀತಿಸಿದವನನ್ನೇ ಮದುವೆಯಾಗುತ್ತೇನೆಂದು ವಧು ಹಠ ಹಿಡಿದಿದ್ದಾಳೆ. ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ಜರುಗಿದೆ.
ಮೈಸೂರಿನ ಯುವತಿಗೆ ಹೆಚ್.ಡಿ ಕೋಟೆ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ಇಂದು ಮದುವೆ ನಿಶ್ಚಿಯವಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ತಾಳಿಕಟ್ಟುವಾಗ ವಧು ನಾಟಕವಾಡಿದ್ದಾಳೆ. ಈಕೆ ತನ್ನ ಪಕ್ಕದ ಮನೆಯವನೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ. ಮದುವೆಗೂ ಮೊದಲು ಯುವತಿಯ ಪ್ರಿಯಕರ ವರನಿಗೆ ಸಂದೇಶ ರವಾನೆ ಮಾಡಿ ಮದುವೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾನೆ. ಇದರ ಬಗ್ಗೆ ಯುವತಿಯನ್ನು ಪ್ರಶ್ನಿಸಿದಾಗ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾಳೆ. ಜೊತೆಗೆ ಮದುವೆಗೆ ಸಿದ್ಧವಾಗಿದ್ದಾಳೆ.
ಆದರೆ, ತಾಳಿ ಕಟ್ಟುವ ವೇಳೆ ಮದುವೆಗೆ ನೋ ಎಂದು ಹೈಡ್ರಾಮಾ ಮಾಡಿದ್ದಾಳೆ. ಇದರಿಂದ ಆಘಾತಕ್ಕೆ ಒಳಗಾದ ವರನ ಪೋಷಕರು ವಧುವಿಗೆ ಛೀಮಾರಿ ಹಾಕಿದ್ದಾರೆ. ಹಠ ಹಿಡಿದ ವಧುವನ್ನ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಳೆ ಹಾನಿ ನಡುವೆಯೇ ಸಾಲ ಮರುಪಾವತಿಗೆ ಬ್ಯಾಂಕ್ನಿಂದ ನೋಟಿಸ್: ಕಂಗೆಟ್ಟ ರೈತರು