ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ಜನರು ತಮ್ಮ ಹಕ್ಕನ್ನು ಚಲಾಯಿಸಿದ್ಧಾರೆ. ವಿಶೇಷ ಎಂದರೆ ಮದುವೆ ಮುಗಿದ ನಂತರ ವಧು-ವರರ ತಮ್ಮ ಪರಿವಾರದೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಈ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಕೋಲಾರದಲ್ಲಿ ವಧು ವರರಿಂದ ಮತದಾನ: ಕೋಲಾರದಲ್ಲಿಯೂ ಸಹ ವಧು ವರ ಇಬ್ಬರೂ ಮದುವೆ ಮುಗಿಸಿಕೊಂಡು ತಮ್ಮ ಹಕ್ಕು ಚಲಾಯಿಸಿದ ಪ್ರಸಂಗ ಕಂಡು ಬಂತು. ಮದುವೆ ಮುಗಿಸಿಕೊಂಡು ನೇರವಾಗಿ ವಿನೋಬ್ ನಗರ ಮತಗಟ್ಟೆಗೆ ಬಂದ ವಧು ವರರು ತಮ್ಮ ಮತದಾನ ಮಾಡಿದರು. ನವದಂಪಿತ ಮಂಜುನಾಥ್ ಹಾಗೂ ರೂಪಿಣಿ ಮತಗಟ್ಟೆ ಸಂಖ್ಯೆ 240 ರಲ್ಲಿ ಮತ ಚಲಾಯಿಸಿ ಇತರರಿಗೆ ಮಾದರಿಯಾದರು.
ಚಿಕ್ಕಮಗಳೂರಿನಲ್ಲಿ ಮದುವೆಗೂ ಮುನ್ನ ಮತದಾನ ಮಾಡಿದ ವಧು: ಚಿಕ್ಕಮಗಳೂರಿನಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಇಲ್ಲಿನ 165ನೇ ಮತಗಟ್ಟೆ ಕೇಂದ್ರದಲ್ಲಿ ಮಧುಮಗಳೊಬ್ಬರು ಹಕ್ಕು ಚಲಾಯಿಸಿದರು. ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿದ ಆಕೆ ಮದುವೆ ದಿರಿಸಿನಲ್ಲೇ ತಮ್ಮ ವೋಟಿಂಗ್ ಮಾಡಿದರು. ಈ ಮೂಲಕ ಮದುವೆ ಸಂಭ್ರಮದಲ್ಲೂ ಕರ್ತವ್ಯಪ್ರಜ್ಞೆ ಮೆರೆದು ಮಾದರಿಯಾದರು.
ಚಿಕ್ಕಬಳ್ಳಾಪುರದಲ್ಲಿ ತುಂಬು ಕುಟುಂಬದ ವೋಟಿಂಗ್: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಮತ ಚಲಾವಣೆ ಉತ್ತಮವಾಗಿದೆ. ಇಲ್ಲಿನ ಚಿಕ್ಕಬಳ್ಳಾಪುರ ಕ್ಷೇತ್ರದ ಒಂದೇ ಕುಟುಂಬದ 65 ಜನರು ಏಕಕಾಲಕ್ಕೆ ಬಂದು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ನಗರದ ಬಾದಾಮ್ ಕುಟುಂಬ ಸದಸ್ಯರು ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತದಾನ ಮಾಡಿ ಮಾದರಿಯಾಗುತ್ತಿದ್ದಾರೆ.
ಅಣ್ಣನ ಹೆಗಲೇರಿ ಬಂದು ತಮ್ಮ ವೋಟ್: ವಿಜಯಪುರದಲ್ಲೂ ಮತದಾರರ ಉತ್ಸಾಹ ಜೋರಾಗಿದೆ. ನಗರದ ಎಸ್‌ಎಸ್ ಹೈಸ್ಕೂಲ್ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 60 ರಲ್ಲಿ ವಿಕಲಚೇತನ ಸಹೋದರನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದ ಅಣ್ಣ ಆತನಿಂದ ಮತ ಹಾಕಿಸಿ ಗಮನ ಸೆಳೆದರು. ವಿಕಲಚೇತನ ಅಬ್ದುಲ್ ಹಮೀದ್ ಅಣ್ಣನ ಸಹಾಯದೊಂದಿಗೆ ಮತ ಹಾಕಿದವರು. ಮತ ಹಾಕಲು ಇಂದು ಮುಂದು ನೋಡುವ ಜನರ ಮಧ್ಯೆ ಸಹೋದರರ ಉತ್ಸಾಹಕ್ಕೆ ಭೇಷ್ ಹೇಳಲೇಬೇಕು.
ಓದಿ: ರಾಮನಗರದಲ್ಲಿ ಕುಮಾರಸ್ವಾಮಿ ಕುಟುಂಬ ಸಮೇತ ಮತದಾನ; ಹಾಸನದ ದೇವಸ್ಥಾನದಲ್ಲಿ ಹೆಚ್ ಡಿ ರೇವಣ್ಣ ಪೂಜೆ ಸಲ್ಲಿಕೆ