ಮೈಸೂರು: ರಸ್ತೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಪಾಲಿಕೆಯ ಬೊಕ್ಕಸದಿಂದ ಕೋಟ್ಯಾಂತರ ರೂಪಾಯಿ ಸೋರಿಕೆಗೆ ಕಾರಣವಾದ ಆರೋಪದ ಮೇಲೆ ಇಬ್ಬರು ಎಂಜಿನಿಯರ್ಗಳನ್ನು ಅಮಾನತು ಮಾಡಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಂ.ಜಿ.ರಸ್ತೆಯಲ್ಲಿ ಡಾಂಬರೀಕರಣ ಸಂಬಂಧ ₹ 1.10 ಕೋಟಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ದೂರನ್ನು ಎಸಿಬಿಗೆ ನೀಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುನಿಲ್ ಬಾಬು ಹಾಗೂ ಕಿರಿಯ ಎಂಜಿನಿಯರ್ ಎಂ.ವಿ.ಮೋಹನಕುಮಾರಿ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಈ ಕಾಮಗಾರಿ ನಡೆಸಿದ ಪ್ರಥಮ ದರ್ಜೆ ಗುತ್ತಿಗೆದಾರ ಕರೀಗೌಡ ಎಂಬುವರನ್ನು ಕಪ್ಪು ಪಟ್ಟಿಗೆ ಸೇರಿಸಲು ತಿರ್ಮಾನಿಸಲಾಗಿದ್ದು, ಪ್ರಕರಣದಲ್ಲಿ ಇನ್ನೂ ಹಲವರ ಮೇಲೆ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.