ಮೈಸೂರು: ''ಪದೇ ಪದೆ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರೇ, ನೀವು ರಾಜ್ಯಕ್ಕೆ ನೀಡಿರುವ ಕೊಡುಗೆಯಾದರು ಏನು? ಲಜ್ಜೆಗೆಟ್ಟ ಕರ್ನಾಟಕದ ಬಿಜೆಪಿಯನ್ನು ಮೊದಲು ಸರಿಮಾಡಿ. ನೀವು ಕರ್ನಾಟಕ ಅಲ್ಲದೇ ಇಡಿ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರುವುದಿಲ್ಲ'' ಎಂದು ವಿಧಾನ ಪರಿಷತ್ ಎಚ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೋಲಿನ ಭೀತಿಯಿಂದ ಹೊಸ ನಾಟಕ ಸೃಷ್ಟಿ ಮಾಡೋದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸ್ಪರ್ಧೆಗಿಳಿದಿವೆ: ಕುಮಾರಸ್ವಾಮಿ ವ್ಯಂಗ್ಯ
ಇಂದು ಮೈಸೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ''ಬೇರೆ ಬ್ಯಾಂಕ್ಗಳ ಜೊತೆ ವಿಲೀನ ಮಾಡಿರುವ ಬ್ಯಾಂಕ್ಗಳನ್ನು ವಾಪಸ್ ಕೊಡಿ, ಹಿಂದಿ ಹೇರಿಕೆ ನಿಲ್ಲಿಸಿ, ನಂದಿನಿ ಅಸ್ತಿತ್ವವನ್ನು ಹಾಳು ಮಾಡಬೇಡಿ ಎಂದ ವಿಶ್ವನಾಥ್ ಅವರು, ''ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಭೇಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮಂತವರು ಹಾಗೂ ಕುಮಾರಸ್ವಾಮಿಯಂತವರ ನೇರವಿನಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ಮುಂದೆ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದಿಲ್ಲ'' ಎಂದು ವಾಕ್ ಸಮರ ನಡೆಸಿದರು.
ಪ್ರತಾಪನ ಬೆತ್ತಲೆ ಪ್ರಪಂಚ ನನ್ನ ಬಳಿಯಿದೆ: ''ಸೋಮಣ್ಣ ಮತ್ತು ಸಿದ್ದರಾಮಯ್ಯ ಕೆಳ ಹಂತದಿಂದ ರಾಜಕೀಯಕ್ಕೆ ಬಂದವರು. ಅವರಿಗೆ ಎಲ್ಲವೂ ಗೊತ್ತಿದೆ. ನೀನು ವರುಣಾ ಕ್ಷೇತ್ರಕ್ಕೆ ಹೋಗಿ, ನಿನ್ನ ಪ್ರತಾಪ ತೋರಿಸಬೇಡ. ನಿನ್ನ ಬೆತ್ತಲೆ ಪ್ರಪಂಚದ ಪ್ರತಾಪಗಳು ನನ್ನ ಬಳಿ ಇದೆ. ಮುಂದಿನ ದಿನಗಳಲ್ಲಿ ಅದನ್ನು ಬಿಡುಗಡೆಗೊಳಿಸುತ್ತೇನೆ'' ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನೀವು ಮಾಡಿರುವ ಅಭಿವೃದ್ಧಿಯನ್ನು ಇಬ್ಬರೂ ನೋಡೋಣ ಬನ್ನಿ: ಸಿದ್ದುಗೆ ಸೋಮಣ್ಣ ಸವಾಲು
ಉತ್ತರ ಭಾರತದವರ ಯಜಮಾನಿಕೆ ಜಾಸ್ತಿಯಾಗ್ತಿದೆ: ''ರಾಜ್ಯದ ಹಲವು ಕಡೆ ತ್ರಿಕೋನ ಸ್ಪರ್ಧೆ ಹಾಗೂ ಕೆಲವು ಕಡೆ ನೇರ ಸ್ಪರ್ಧೆ ಕಂಡುಬರುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಆಡಳಿತಾರೂಢ ಬಿಜೆಪಿ ಯಾವ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಬರೀ ಭಾವನಾತ್ಮಕ ವಿಚಾರ ಇಟ್ಟುಕೊಂಡು, ಧರ್ಮಾಧಾರಿತ ರಾಜಕಾರಣವನ್ನು ಬಿಜೆಪಿ ಮಾಡುತ್ತಿದ್ದು, ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿಲ್ಲ ಎಂದ ವಿಶ್ವನಾಥ್ ತಿಳಿಸಿದರು.
''ದಕ್ಷಿಣ ಭಾರತದ ಮೇಲೆ ಉತ್ತರ ಭಾರತದವರ ಯಜಮಾನಿಕೆ ಜಾಸ್ತಿ ಆಗುತ್ತಿದ್ದು, ಕರ್ನಾಟಕದ ಮೇಲೂ ಇವರ ಯಜಮಾನಿಕೆ ಹೆಚ್ಚಾಗಿದೆ. ಪ್ರತಿಯೊಂದು ವಿಚಾರಕ್ಕೂ ಜಿಎಸ್ಟಿ ಪಾವತಿಸಬೇಕಾಗಿದ್ದು, ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ನಮ್ಮ ಹೆಣ್ಣು ಮಕ್ಕಳು ತತ್ತರಿಸಿ ಹೋಗಿದ್ದಾರೆ. ನಮ್ಮ ಜಿಎಸ್ಟಿ ಪಾಲು ಸರಿಯಾಗಿ ಸಿಗುತ್ತಿಲ್ಲ. ಉತ್ತರ ಭಾರತದ ಕಡೆ ಹರಿದು ಹೋಗುತ್ತಿದ್ದು, ಉತ್ತರ ಭಾರತದವರ ಯಜಮಾನಿಕೆ ಹೆಚ್ಚಾಗಿದೆ'' ಎಂದು ಎಚ್.ವಿಶ್ವನಾಥ್ ಆರೋಪಿಸಿದರು.
ಇದನ್ನೂ ಓದಿ: ಕಾರಿನಲ್ಲಿ ಕೂರುವ ವೇಳೆ ಸ್ಲಿಪ್ ಆದ ಸಿದ್ದರಾಮಯ್ಯ: ನೀರು ಕೊಟ್ಟು ಆರೈಕೆ ಮಾಡಿದ ಸಹಾಯಕ