ಮೈಸೂರು: ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಸಂಪ್ರದಾಯದ ಹೆಸರಿನಲ್ಲಿ ತಮ್ಮ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮುನ್ನವೇ, ಓದುವ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರ ಗರ್ಭಾವಸ್ಥೆಯು ಬೆಳವಣಿಗೆಯಾಗದೆ ಅನಾರೋಗ್ಯ ಪೀಡಿತ ಮಕ್ಕಳ ಜನನವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಸರಾಕ್ಕೆ ಆಗಮಿಸಿರುವ ಮಾವುತರು ಹಾಗೂ ಮಕ್ಕಳಿಗೆ ಅರಮನೆ ಆವರಣದ ಟೆಂಟ್ ಶಾಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪದ್ಮ, ಹಾಡಿಗಳ ಬುಡಕಟ್ಟು ಜನರಲ್ಲಿ ಹೆಣ್ಣು ಮಕ್ಕಳು ಋತುಮತಿಯಾಗದಿದ್ದರೂ ಸಹ ಅವರ ಪೋಷಕರು ಮದುವೆ ಮಾಡುವುದು ಕಂಡುಬರುತ್ತವೆಯೆಂದು ತಿಳಿಸಿದರು.
ಜೊತೆಗೆ, ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರ ಅವರಿಗೆ ಮದುವೆ ಮಾಡಬೇಕು. ಅದಕ್ಕಿಂತ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿದರೆ ಅದು ಕಾನೂನು ಪ್ರಕಾರ ತಪ್ಪಾಗುತ್ತದೆ. 1098 ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಬಾಲ್ಯ ವಿವಾಹ ತಡೆದು ಆ ಮಕ್ಕಳನ್ನು ರಕ್ಷಣೆ ಮಾಡಲಾಗುವುದುದೆಂದರು. ಇನ್ನೂ ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೆ ಹಾಕಿಕೊಳ್ಳದೆ ಅವರಿಗೆ ಶಿಕ್ಷಣವನ್ನು ನೀಡುವ ಕೆಲಸವನ್ನು ಪೋಷಕರು ಮಾಡಬೇಕೆಂದು ಮನವರಿಕೆ ಮಾಡಿಕೊಟ್ಟರು.