ಮೈಸೂರು : ಯಡಿಯೂರಪ್ಪನವರ ಆಪರೇಷನ್ ಕಮಲದ ಸಂದರ್ಭದಲ್ಲಿ, ತಮಗೆ ಬಿಜೆಪಿ ಸೇರಲು 30 ಕೋಟಿ ಆಫರ್ ನೀಡಲಾಗಿತ್ತು ಎಂದು ಮಾಜಿ ಶಾಸಕ ಅಶೋಕ್ ಪಟ್ಟಣ್ಶೆಟ್ಟಿ ಹೇಳಿಕೆ ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಬೀಳಿಸುವ ಪಿತೂರಿ ನಡೆಸಿದ್ದ ಬಿಜೆಪಿಯವರು, ನನ್ನ ಮನೆಗೆ ಬಂದು ಕಾರಿನಲ್ಲಿ 30 ಕೋಟಿ ಹಣವಿದೆ. ನಿಮ್ಮ ಜೀವಮಾನದಲ್ಲಿ ಇಷ್ಟೊಂದು ಹಣ ಸಂಪಾದನೆ ಮಾಡಲು ಆಗುವುದಿಲ್ಲ. ಬೇರೆಯವರಿಗೆ ಹತ್ತರಿಂದ 15 ಕೋಟಿ ಕೊಡುತ್ತಿದ್ದೇವೆ ಎಂದು ಆಮಿಷ ಒಡ್ಡಿದ್ದರು ಎಂದು ಹೇಳಿದರು.
ನೀವು ಲಿಂಗಾಯತರು ಅದಕ್ಕೆ 30 ಕೋಟಿ ತಂದಿದ್ದೇವೆ. ಇದನ್ನು ಪಡೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ನಮ್ಮನ್ನು ಬೆಂಬಲಿಸಿ ಎಂದು ಬಿಜೆಪಿ ಮುಖಂಡರು ನನ್ನನ್ನು ಒತ್ತಾಯಿಸಿದ್ದರು. ಆದರೆ, ನಾನು ನಾನು ಇದಕ್ಕೆ ಒಪ್ಪಲಿಲ್ಲ, ನನ್ನ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷ್ ಸರ್ಕಾರದಲ್ಲಿ ಅವರಿಗೆ ಗಲ್ಲು ಶಿಕ್ಷೆ ಆಗಿತ್ತು.
ಅದರಿಂದ ತಪ್ಪಿಸಿಕೊಂಡು ಸುಮಾರು 107 ವರ್ಷ ಬದುಕಿದ್ದರು. ಅಂತಹ ಸ್ವಾತಂತ್ರ್ಯ ಹೋರಾಟಗಾರರು ಮಗನಾಗಿ ನಾನು ನನ್ನನ್ನು ಮಾರಿಕೊಂಡು ನನಗೆ ಮತ ನೀಡಿದ ಮತದಾರರಿಗೆ ದ್ರೋಹ ಮಾಡಲು ಇಷ್ಟ ಇಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.
ನನ್ನನ್ನು ನಂಬಿರುವ ಕಾಂಗ್ರೆಸ್ ಪಕ್ಷಕ್ಕೆ ನನ್ನ ನಿಷ್ಠೆಯನ್ನು ಪ್ರದರ್ಶಿಸಿದೆ. ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಆಡಳಿತಕ್ಕೆ ತರುವುದು ನಮ್ಮೆಲ್ಲರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಬಲಪಡಿಸಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಓದಿ : ಹೆಣ ಹೂಳಲೂ ಜಿಎಸ್‌ಟಿ ಕಟ್ಟಬೇಕು ಎಂದರೆ ಇದೆಂಥಾ ನ್ಯಾಯ ರೀ ಸರ್ಕಾರದ್ದು?: ಡಿಕೆಶಿ ಪ್ರಶ್ನೆ