ಮೈಸೂರು: ನಗರದ ಹಜರತ್ ಇಮಾಂ ಷಾ ವಲಿ ದರ್ಗಾಕ್ಕೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ ಹಾಗೂ ಇತರೆ ಆನೆಗಳು ದರ್ಗಾದ ಮೌಲ್ವಿಗಳಿಂದ ಆಶೀರ್ವಾದ ಪಡೆದವು. ಅಂಬಾರಿ ಹೊರುವ ಮುನ್ನಾದಿನ ತೂಕ ಪರೀಕ್ಷಿಸುವ ಮುನ್ನ ದರ್ಗಾಗೆ ಭೇಟಿ ಕೊಟ್ಟು ಇಸ್ಲಾಂ ಧರ್ಮ ಗುರುಗಳಿಂದ ಆಶೀರ್ವಾದ ಪಡೆದು ತೆರಳುವುದು ವಾಡಿಕೆ. ಅದರಂತೆ ಇಂದು ಸಂಜೆ ಇಲ್ಲಿಗೆ ಆಗಮಿಸಿದ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಈಶ್ವರ, ವಿಜಯ ಹಾಗೂ ಧನಂಜಯ ಆನೆಗಳು ದರ್ಗಾದಲ್ಲಿ ಆಶೀರ್ವಾದ ಪಡೆದವು.
ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಹಾಗೂ ದುಷ್ಟಶಕ್ತಿ ನಿವಾರಣೆಗೆ ಪ್ರಾರ್ಥಿಸಿ ನಗರದ ಕೃಷ್ಣವಿಲಾಸ ರಸ್ತೆಯಲ್ಲಿರುವ ಇಮಾಮ್ ಷಾ ವಲಿ ದರ್ಗಾದಲ್ಲಿ ಸೋಮವಾರ ರಾತ್ರಿ ದಸರಾ ಆನೆಗಳಿಗೆ ಧರ್ಮಗುರು ನಕೀಬ್ ಪೂಜೆ ಸಲ್ಲಿಸಿದರು. ಗಜಪಡೆ ಸಾರಥಿ ಅರ್ಜುನ ಸೇರಿದಂತೆ ಆಗಮಿಸಿದ್ದ 5 ಆನೆಗಳನ್ನು ನೋಡುವ ಸಲುವಾಗಿ ನೂರಾರು ಜನ ಜಮಾಯಿಸಿದ್ದರು.
ಆನೆಗಳಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಧರ್ಮಗುರುಗಳಾದ ಮೊಹ್ಮದ್ ಹಕಿಮುಲ್ಲಾ ಶಾ ಖಾದ್ರಿ, ಪ್ರಾಣಿಗಳು ಕೂಡ ಇಲ್ಲಿಗೆ ತಮ್ಮ ಭಕ್ತಿ ವ್ಯಕ್ತಪಡಿಸಲು ಬರುತ್ತವೆ. ಆ ಸಂದರ್ಭ ಅವುಗಳ ಕಣ್ಣಲ್ಲಿ ನೀರು ಬರುವುದು ಸಹಜ. ತಮ್ಮ ಕರ್ತವ್ಯ ನಿರ್ವಹಿಸಲು ಕಾಡಿನಿಂದ ನಾಡಿಗೆ ಬಂದಿದ್ದು, ವಾಡಿಕೆಯಂತೆ ದರ್ಗಾಗೆ ಬಂದು ಆಶೀರ್ವಾದ ಪಡೆದು ತೆರಳಿವೆ. ಪ್ರತಿವರ್ಷ ಬಂದು ಇಲ್ಲಿ ಆಶೀರ್ವಾದ ಪಡೆದು ತೆರಳುತ್ತಿವೆ. ಯಾವುದೇ ತೊಂದರೆ ಈವರೆಗೂ ಎದುರಾಗಿಲ್ಲ. ನಾನು ನನ್ನ ಬಾಲ್ಯಾವಸ್ಥೆಯಿಂದ ಆನೆಗಳು ಬರುವುದನ್ನು ನೋಡುತ್ತಿದ್ದೇನೆ 20 ವರ್ಷದಿಂದ ವೀಕ್ಷಿಸುತ್ತಿದ್ದೇನೆ ಎಂದರು.