ಮೈಸೂರು: ನಿವೃತ್ತ ಕೇಂದ್ರದ ಗುಪ್ತಚರ ಇಲಾಖೆ ಅಧಿಕಾರಿಯ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹತ್ಯೆಯಾದ ನಿವೃತ್ತ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ ಆರ್ಎಸ್ ಕುಲಕರ್ಣಿ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಕುಲಕರ್ಣಿ ಅವರ ಸಾವು ಈ ರೀತಿ ಆಗಬಾರದಿತ್ತು. ಭೂ ವ್ಯಾಜ್ಯದ ಸಂಬಂಧ ಈ ಕೃತ್ಯ ನಡೆದಿದೆ. ಸರ್ಕಾರಿ ಸೇವೆ ಮಾಡಿದ ವ್ಯಕ್ತಿಯ ಸಾವು ಈ ರೀತಿ ಆಗಿರುವುದು ಶೋಚನೀಯ. ಈ ಕೃತ್ಯ ಎಸಗಿದ ಇಬ್ಬರನ್ನು ಬಂಧಿಸಲಾಗಿದ್ದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.
ಮೈಸೂರಿನ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಂತ ನಗರವಾದ ಮೈಸೂರಿನಲ್ಲಿ ಇಂತಹ ಘಟನೆಗಳು ನಡೆದಾಗ ಕೆಟ್ಟ ಸಂದೇಶ ಹೋಗಬಾರದು ಆ ರೀತಿ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ತಪ್ಪು ಮಾಡಿ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿದ್ದ ವ್ಯಕ್ತಿಗಳನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇವೆ ಜೊತೆಗೆ ಶಾಂತ ನಗರ ಹಾಗೂ ನಿವೃತ್ತರ ನಗರ ಮೈಸೂರಿನ ಬಗ್ಗೆ ಕೆಟ್ಟ ಹೆಸರು ಬಾರದ ರೀತಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿಯನ್ನು ಉಚ್ಚಾಟನೆ ಮಾಡಿ: ಕಾಂಗ್ರೆಸ್ನ ನೀತಿಯೇ ಹಿಂದೂ ಧರ್ಮವನ್ನು ಹಂಗಿಸುವುದು ಹಾಗೂ ಅವಮಾನ ಮಾಡುವುದು ಆಗಿದೆ. ಇದು ಅಲ್ಪಸಂಖ್ಯಾತರ ಮತ ಸೆಳೆಯುವ ಷಡ್ಯಂತ್ರವಾಗಿದ್ದು, ಆ ಮೂಲಕ ಸಿಂಹಾಸನ ಏರಬಹುದು ಎಂದುಕೊಂಡಿದ್ದಾರೆ. ಈಗಾಗಲೇ ದೇಶಾದ್ಯಂತ ಅವರನ್ನು ಕಿತ್ತು ಹಾಕಲಾಗಿದೆ.
ಚುನಾವಣೆ ಹಿನ್ನಲೆಯಲ್ಲಿ ಇದೊಂದು ಕುತಂತ್ರವಾಗಿದೆ. ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿಲ್ಲ. ಈ ರೀತಿ ಮಾತನಾಡುವವರನ್ನು ಖಂಡಿಸುತ್ತದೆ. ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದಾದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ, ನಾವು ನೂಪುರ್ ಶರ್ಮ ಮೇಲೆ ಕ್ರಮ ಕೈಗೊಂಡ ರೀತಿಯಲ್ಲಿ ಸತೀಶ್ ಜಾರಕಿಹೊಳಿಯನ್ನು ಪಕ್ಷದಿಂದ ತೆಗೆದುಹಾಕಲಿ ಎಂದು ಇದೇ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇದನ್ನೂ ಓದಿ: ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣ: ಪಕ್ಕದ ಮನೆಯವರ ವಿರುದ್ಧ ಅಳಿಯನಿಂದ ದೂರು