ಮೈಸೂರು: ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆ ಸಿಗಲು ಡಾ. ಅಂಬೇಡ್ಕರ್ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ನಗರದ ಲಲಿತ್ ಮಹಲ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿರುವ ಯಾರೂ ಪರಿವಾರವಾದದಿಂದ ಜನಪ್ರತಿನಿಧಿ ಆದವರಲ್ಲ. ಸ್ವಂತ ಪರಿಶ್ರಮದಿಂದ ಮತ್ತು ಕುಟುಂಬದ ಬೆಂಬಲ ಇಲ್ಲದೆ ಜನಪ್ರತಿನಿಧಿ ಆಗಲು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮೋದಿ ಪ್ರಧಾನಿಯಾಗಲು ಅಂಬೇಡ್ಕರ್ ಕಾರಣ : ಬಾಬಾ ಸಾಹೇಬರು ಬರೆದ ಸಂವಿಧಾನದ ಕಾರಣಕ್ಕಾಗಿ ನಾನು ಲೋಕಸಭಾ ಸದಸ್ಯನಾಗಲು ಸಾಧ್ಯವಾಗಿದೆ. ಮೈಸೂರು ಸಮಗ್ರ ಅಭಿವೃದ್ಧಿಗೆ ಒಡೆಯರ್ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅದೇ ರೀತಿ ದೇಶವನ್ನು ಸರ್ವತೋಮುಖ ಅಭಿವೃದ್ಧಿಯಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆ ಸಿಗಲು ಡಾ. ಅಂಬೇಡ್ಕರ್ ಅವರೇ ಕಾರಣ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಮರೆತಿತ್ತು: ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಮರೆತಿತ್ತು. ಅದುವೇ ಇಂದು ಕಾಂಗ್ರೆಸ್ ಪಕ್ಷಕ್ಕೆ ಶಾಪ ಎಂದು ಟೀಕಿಸಿದರು. ಅಂಬೇಡ್ಕರರ ಫೋಟೋ ಇಟ್ಟುಕೊಂಡು ರಾಜಕಾರಣ ಮಾಡಿದರು. ಅವರು ಲೋಕಸಭೆಗೆ ಹೋಗದಂತೆ ನೋಡಿಕೊಂಡರು. ಅವರನ್ನು ಅಗೌರವದಿಂದ ನಡೆಸಿಕೊಂಡರು. ಆದರೆ, ಮೋದಿ ಅವರು ಪಂಚತೀರ್ಥಗಳ ಅಭಿವೃದ್ಧಿ ಮಾಡಿ ನ್ಯಾಯ ಕೊಡುವ ಕಾರ್ಯ ಮಾಡಿದ್ದಾರೆ. ರಾಜ್ಯದಲ್ಲಿ ಎಸ್ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಉತ್ತಮ ಸಂಘಟನೆ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ, ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿವಿಧ ರಾಜ್ಯಗಳ ಪದಾಧಿಕಾರಿಗಳು, ರಾಜ್ಯದ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಿಜೆಪಿ 150 ಸ್ಥಾನ ಗೆಲ್ಲಲಿದೆ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಪಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದರು. ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದ ಅವರು, ಜೆಡಿಎಸ್ ಕೇಂದ್ರಿತ ಪ್ರದೇಶದಲ್ಲಿ ಬಿಜೆಪಿ ಬೆಳೆದಿದೆ. ಹಿಂದೆ ಶ್ರೀಮಂತರ, ವಿದ್ಯಾವಂತರ, ನಗರವಾಸಿ ಪಕ್ಷ ಎಂದು ಬಿಜೆಪಿಯನ್ನು ಕಾಂಗ್ರೆಸ್ ಹೇಳುತ್ತಿತ್ತು. ಆದರೆ, ಇದೀಗ ಬಿಜೆಪಿ ಸರ್ವವ್ಯಾಪಿಯಾಗಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿದೆ ಎಂದು ಕಟೀಲ್ ಅಭಿಪ್ರಾಯಪಟ್ಟರು.
ಕಾಂಗ್ರೆಸ್ಗೆ ಹಿಂದೂಗಳು ಸಿಗುವುದಿಲ್ಲ: 10 ದಿನದ ಬೂತ್ ವಿಜಯ ಅಭಿಯಾನದಲ್ಲಿ ಪೇಜ್ ಪ್ರಮುಖರು, ಮತದಾರರ ಸಂಪರ್ಕ, ಮನೆ - ಮನೆಗಳಲ್ಲಿ ಪಕ್ಷದ ಸ್ಟಿಕರ್ ಅಂಟಿಸುವುದು, ವಾಟ್ಸ್ಆ್ಯಪ್ ಗ್ರೂಪ್ಗಳ ರಚನೆ, ಕೇಂದ್ರ ಮತ್ತು ರಾಜ್ಯಗಳ ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಲುಪಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಲು ಒಬ್ಬ ಹಿಂದೂ ಸಹ ಸಿಗುವುದಿಲ್ಲ ಎಂದು ಬಿಜೆಪಿ ಹೇಳಿದರು.
ಡಿಕೆಶಿ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ : ಕಾಂಗ್ರೆಸ್ ಅಂದರೇ ಭ್ರಷ್ಟಾಚಾರ. ಸಿದ್ದರಾಮಯ್ಯ ಮತ್ತು ಡಿಕೆಶಿ ಭ್ರಷ್ಟಾಚಾರಿಗಳು. ನಾವು ರಾಷ್ಟ್ರದ ಬಗ್ಗೆ ಯೋಚನೆ ಮಾಡುತ್ತೇವೆ. ಇವರು ಯೋಚನೆ ಮಾಡುವುದೇ ಬೇರೆ. ಕಾಂಗ್ರೆಸ್ನ ಯೋಜನೆಯಲ್ಲಿ ಹಿಂದೂಗಳ ಹತ್ಯೆ ಇತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರಿಂದ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ನಿಷೇಧ ಮಾಡಲು ಸಾಧ್ಯವಾಯಿತು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಇದನ್ನೂ ಓದಿ : ಮುಂದಿನ ಚುನಾವಣೆಗೂ ಮುಂಚೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ: ನಳಿನ್ ಕುಮಾರ್ ಕಟೀಲ್