ಮೈಸೂರು: ಇಂಡಿಕೇಟರ್ ಹಾಕಿ ಕ್ರಾಸ್ ಮಾಡು ಎಂದು ಹೇಳಿದ ಯುವಕರ ಮೇಲೆ, ತಂದೆ ಮತ್ತು ಮಗ ದರ್ಪ ತೋರಿರುವ ಆರೋಪ ಪ್ರಕರಣ ನಗರದ ಟಿ ಕೆ ಬಡಾವಣೆಯ ತರಳಬಾಳು ವೃತ್ತದಲ್ಲಿ ಸೋಮವಾರ ರಾತ್ರಿ ನಡೆದಿದೆ. ಯುವಕರ ಮಾತಿನಿಂದ ಕೋಪಗೊಂಡ ತಂದೆ ಮಗ ದುಬಾರಿ ಬೆಲೆಯ ಕಾರನ್ನು ಅವರ ಮೇಲೆ ಹತ್ತಿಸಿ, ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಗರದ ಟಿ ಕೆ ಬಡಾವಣೆಯ ತರಳಬಾಳು ವೃತ್ತದಲ್ಲಿ ಇಂಡಿಕೇಟರ್ ಹಾಕದೆ, ದುಬಾರಿ ಬೆಲೆಯ ಕಾರಿನಲ್ಲಿ ವಾಸು ಹಾಗೂ ಅವರ ಪುತ್ರ ದರ್ಶನ್ ವೇಗವಾಗಿ ಬರುತ್ತಿದ್ದರು ಎನ್ನಲಾಗ್ತಿದೆ. ಮತ್ತೊಂದು ಕಡೆಯಿಂದ ಕಾರಿನಲ್ಲಿ ರಾಹುಲ್ ಹಾಗೂ ಅವನ ಸ್ನೇಹಿತರಾದ ಪ್ರಜ್ವಲ್, ಆನಂದ್ ಬರುತ್ತಿದ್ದರು. ದರ್ಶನ್ಗೆ ಇಂಡಿಕೇಟರ್ ಹಾಕಿಕೊಂಡು ಹೋಗು ಎಂದು ಮತ್ತೊಂದು ಕಾರಿನಲ್ಲಿ ಬಂದ ಯುವಕರು ಕೈತೋರಿಸಿ ಹೇಳಿದ್ದಾರೆ.
ಇದರಿಂದ ಸಿಟ್ಟಾದ ದರ್ಶನ್ ಹಾಗೂ ಅವರ ತಂದೆ ವಾಸು ಕಾರು ನಿಲ್ಲಿಸಿ ಕಾರಿನಲ್ಲಿದ್ದ ಯುವಕರ ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗ್ತಿದೆ. ಬಳಿಕ ರಸ್ತೆಯ ಮೇಲೆ ಇದ್ದ ಯುವಕರ ಮೇಲೆ ಕಾರು ಹತ್ತಿಸಿ ತಂದೆ - ಮಗ ಕ್ರೌರ್ಯ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಲ್ಲಿ ರಾಹುಲ್ ತೀವ್ರ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮಹಿಳೆಯರು ಸೇರಿ ಆರು ಮಂದಿಯಿಂದ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ: ಭಯಾನಕ ಮರ್ಡರ್ ಕಂಡು ಬೆಂಗಳೂರು ಪೊಲೀಸರಿಗೆ ಶಾಕ್
ಈ ಸಂಬಂಧ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದರ್ಶನ್ ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ. ಅವರ ತಂದೆಯ ಮೇಲೂ ಸಹ ಪ್ರಕರಣ ದಾಖಲಿಸಬೇಕು ಎಂದು ಗಾಯಗೊಂಡಿರುವ ಯುವಕರ ಪೋಷಕರು ಆಗ್ರಹಿಸಿದ್ದಾರೆ.