ಮೈಸೂರು : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪತಿಗೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಂಜನಗೂಡು ತಾಲೂಕಿನ ಹೊಸ ಕಡಜಟ್ಟಿ ಗ್ರಾಮದಲ್ಲಿ ತೋಟದ ಬಳಿ ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು. ಪತಿ ಮುಂದೆಯೇ ಪತ್ನಿ ಮೇಲೆರಗಿ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ ಆರೋಪಿ ನವೀನ್ ಕುಮಾರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಹಿಳೆ ಮೇಲೆ ಕೆಟ್ಟ ದೃಷ್ಟಿ ಬೀರಿದ್ದ ನವೀನ್ ಕುಮಾರ್, ಪತಿ ಮನೆ ಒಳಗೆ ತೆರಳಿದ್ದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಪತ್ನಿಯ ಚೀರಾಟ ಕೇಳಿ ಪತಿ ಓಡಿ ಬಂದು ರಕ್ಷಣೆಗೆ ಧಾವಿಸಿದಾಗ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆರೋಪಿ ಸೆರೆಗಾಗಿ ಹುಲ್ಲಹಳ್ಳಿ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟಿ ನೇತೃತ್ವದಲ್ಲಿ ತಂಡ ರಚಿಸಿ ಪೊಲೀಸರು ಬಲೆ ಬೀಸಿದ್ದರು. ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ರಮೇಶ್ ಕರಕಿಕಟ್ಟಿ, ಎಎಸ್ಐ ಶಿವಣ್ಣ, ಹೆಡ್ ಕಾನ್ಸ್ಟೆಬಲ್ ಶಿವಕುಮಾರ್ ಇದ್ದರು.
ಇದನ್ನೂ ಓದಿ: ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ.. ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಹಲ್ಲೆ(ಪ್ರತ್ಯೇಕ ಘಟನೆ) : ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ (ಮಾರ್ಚ್ 29-23) ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಆರೋಪಿಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಕಂಬಕ್ಕೆ ಕಟ್ಟಿ ಆರೋಪಿಗೆ ಥಳಿಸಿದ ಗ್ರಾಮಸ್ಥರು : ಮಹದೇವ (57) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಎಂಬುದು ತಿಳಿದು ಬಂದಿತ್ತು. ಮಹದೇವ ಬುದ್ಧಿಮಾಂದ್ಯ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದಾಗ ಬಾಲಕಿ ಕೂಗಾಡಿದ್ದಳು. ಕೂಗಾಟದ ಶಬ್ದ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು. ನಂತರ ಆರೋಪಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದರು.
ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ಠಾಣೆಯ ಪೊಲೀಸರು ಆರೋಪಿ ಮಹದೇವನನ್ನು ವಶಕ್ಕೆ ಪಡೆದಿದ್ದರು. ಆದರೆ ಮಹದೇವ ಅಷ್ಟೊತ್ತಿಗಾಗಲೇ ಅಸ್ವಸ್ಥನಾಗಿದ್ದ ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆ ಆತನನ್ನು ಚಿಕಿತ್ಸೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.