ಮೈಸೂರು : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಯಾಂಡಲ್ವುಡ್ ನಟ ಸುದೀಪ್ ಅವರು ಯಾವುದೇ ಪಕ್ಷದ ರಾಜಕೀಯ ಪ್ರಚಾರದಲ್ಲಿ ಭಾಗವಹಿಸಬಾರದು ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ಮನವಿ ಮಾಡಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ಯಾವಪ್ಪನಾಯಕ ಅವರು, ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಹದಿನೈದು ಮೀಸಲು ಕ್ಷೇತ್ರಗಳಿಗೆ ಎಲ್ಲ ರಾಜಕೀಯ ಪಕ್ಷಗಳಿಂದ ನಮ್ಮ ಜನಾಂಗದವರೇ ಸ್ಪರ್ಧೆ ಮಾಡುತ್ತಾರೆ. ಇಲ್ಲಿ ಯಾರೇ ಗೆದ್ದರೂ - ಸೋತರು ಸಮುದಾಯದವರೇ ಆಗಿರುವುದರಿಂದ ಇಲ್ಲಿ ಒಂದು ಪಕ್ಷದ ಪರವಾಗಿ ನೀವು ಪ್ರಚಾರಕ್ಕೆ ಹೋದರೆ ಜನಾಂಗದಲ್ಲಿ ತಪ್ಪು ಭಾವನೆ ಮೂಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : 'ಸುದೀಪ್ ಇದೇ ಬೆಂಬಲವನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದರೆ ವಿರೋಧ ಮಾಡುತ್ತಿದ್ದರೇ?'
ಮೈಸೂರು ವಿಭಾಗದಲ್ಲಿ ನಮ್ಮ ಜನಾಂಗವು ಸುಮಾರು 14 ರಿಂದ 15 ಲಕ್ಷದಷ್ಟಿದ್ದಾರೆ. ಪ್ರಸ್ತುತ ಕೇವಲ ಎಚ್.ಡಿ. ಕೋಟೆ ಮೀಸಲು ಕ್ಷೇತ್ರ ಮಾತ್ರಕ್ಕೆ ಸ್ಪರ್ಧಿಸಲು ಎಲ್ಲ ರಾಜಕೀಯ ಪಕ್ಷದವರು ಅವಕಾಶ ಕೊಡುತ್ತಾರೆ. ಸಾಮಾನ್ಯ ಕ್ಷೇತ್ರಗಳಲ್ಲಿ ಯಾವುದೇ ಪಕ್ಷವು ಕೂಡ ಸ್ಪರ್ಧೆ ಮಾಡಲು ಅವಕಾಶ ನೀಡಿಲ್ಲ. ಎಚ್.ಡಿ. ಕೋಟೆ ಕ್ಷೇತ್ರಕ್ಕೆ ಬೇರೆ ಪಕ್ಷಗಳು ಮೈಸೂರು ಭಾಗದ ನಾಯಕರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಿವೆ. ಆದರೆ, ಬಿಜೆಪಿ ಪಕ್ಷ ನಮ್ಮ ಮೈಸೂರು ಭಾಗದವರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡದೇ ಹೊರಗಿನವರಿಗೆ ಅವಕಾಶ ನೀಡಿರುವುದು ಮೈಸೂರು ಭಾಗದ ನಾಯಕರಿಗೆ ಆಗಿರುವ ರಾಜಕೀಯ ಅನ್ಯಾಯ ಎಂದು ದ್ಯಾವಪ್ಪನಾಯಕ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸುದೀಪ್ ಸಿಎಂ ಮಾಡ್ತೇವಿ ಅಂತಾ ಹೇಳಿ ಮತ ಪಡೆದರೂ ಆಶ್ಚರ್ಯವೇನಿಲ್ಲ: ಸತೀಶ್ ಜಾರಕಿಹೊಳಿ
ಇನ್ನು ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ವರಿಷ್ಠರು ಮತ್ತೊಮ್ಮೆ ಎಚ್.ಡಿ. ಕೋಟೆ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಮರು ಪರಿಶೀಲಿಸಿ ಮೈಸೂರು ಭಾಗದ ನಾಯಕರಿಗೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಸುದೀಪ್ ಪ್ರತಿಕ್ರಿಯೆ : ಇತ್ತೀಚಿಗೆ ನಟ ಸುದೀಪ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಕೂಡ ಒಟ್ಟಾಗಿ ಚುನಾವಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಸುದೀಪ್, ಬೊಮ್ಮಾಯಿ ಅವರು ನನ್ನ ಕಷ್ಟದ ಕಾಲದಿಂದಲೂ ಜೊತೆಗಿದ್ದವರು. ನನ್ನ ಮತ್ತು ಅವರ ನಡುವೆ ಉತ್ತಮ ಬಾಂದವ್ಯ ಇರುವುರಿಂದ ನಾನು ಬೊಮ್ಮಾಯಿ ಮಾಮ ಎಂದು ಕರೆಯುತ್ತೇನೆ. ಹೀಗಾಗಿ ಸಿಎಂ ಬೊಮ್ಮಾಯಿ ಅವರು ಹೇಳಿದ ಕಡೆ ಹೋಗಿ ಪ್ರಚಾರ ಮಾಡುತ್ತೇನೆ. ಇದು ಪಕ್ಷದ ಪರವಾಗಿ ಪ್ರಚಾರವಲ್ಲ. ವ್ಯಕ್ತಿಯ ಪರ. ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ನಟ ಸುದೀಪ್ ಅವತ್ತೇ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ : ಸಿಎಂ ಬೊಮ್ಮಾಯಿ ಪರ ನಾನು ನಿಲ್ಲುತ್ತೇನೆ, ಆದರೆ ಪಕ್ಷ ಸೇರಲ್ಲ: ಸುದೀಪ್ ಸ್ಪಷ್ಟನೆ