ಮೈಸೂರು: ಎರಡನೇ ಬಾರಿಯೂ ಮತ್ತೆ 3 ಮರಿಗೆ ಜನ್ಮ ನೀಡಿದ ಹುಲಿಯೊಂದು ತನ್ನ ಮರಿಗಳನ್ನ ಹೊರ ಪ್ರಪಂಚಕ್ಕೆ ಕರೆದುಕೊಂಡು ಬಂದು ಆಟವಾಡುತ್ತಿರುವ ದೃಶ್ಯ ಹವ್ಯಾಸಿ ಛಾಯಾಗ್ರಾಹಕನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಕನಕೋಟೆ ಅರಣ್ಯ ಹಾಗೂ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಇತ್ತೀಚೆಗೆ ಹುಲಿಗಳ ಸಂತತಿ ಹೆಚ್ಚಾಗಿದೆ. ಕಳೆದ 3 ವರ್ಷಗಳ ಹಿಂದೆ 3 ಗಂಡು ಹುಲಿ ಮರಿಗೆ ಜನ್ಮ ನೀಡಿದ ಹೆಣ್ಣು ಹುಲಿ, ಮತ್ತೆ 2ನೇ ಬಾರಿಗೆ 3 ಹುಲಿ ಮರಿಗಳಿಗೆ ಜನ್ಮ ಕೊಟ್ಟಿದೆ. ಮೊದಲ ಬಾರಿಗೆ ಆ ಮರಿಗಳನ್ನು ಹೊರಗೆ ಕರೆದುಕೊಂಡು ಬಂದು ಅವುಗಳಿಗೆ ಬೇಟೆ ಆಡುವುದನ್ನ ಕಲಿಸುವ ಪ್ರಯತ್ನ ಮಾಡುತ್ತಿದೆ.
ಹುಲಿಗಳ ಸಂತಾನಾಭಿವೃದ್ಧಿ ಹೇಗೆ?
ಸಾಮಾನ್ಯವಾಗಿ ಹುಲಿಗೆ 16 ವರ್ಷ ಆಯಸ್ಸು. ಅದರಲ್ಲಿ ಕಾಡಿನ ಹುಲಿಗೆ ಸರಾಸರಿ 12 ವರ್ಷ. 2 ವರ್ಷದಿಂದ ಸಂತಾನಾಭಿವೃದ್ಧಿಗೆ ಕಾರಣವಾದರೆ 108 ದಿನಗಳ ಕಾಲ ಗರ್ಭ ಧರಿಸಿ, ನಂತರ 2 ವರ್ಷಗಳ ಕಾಲ ತನ್ನ ಮರಿಗಳನ್ನು ಸಾಕುವ ಹುಲಿ ಈ ಸಂದರ್ಭದಲ್ಲಿ ಗರ್ಭ ಧರಿಸುವುದಿಲ್ಲ. ತನ್ನ ಮರಿಗಳನ್ನು ಬೇರೆ ಮಾಡಿದ ನಂತರ ಗರ್ಭ ಧರಿಸುವ ಹುಲಿ ಸಾಮಾನ್ಯವಾಗಿ ಒಂಟಿ ಜೀವಿಯಾದರೆ, ನಾಗರಹೊಳೆಯ ಈ ಹೆಣ್ಣು ಹುಲಿ ಕಳೆದ 3 ವರ್ಷಗಳ ಹಿಂದೆ 3 ಮರಿಗೆ ಜನ್ಮ ನೀಡಿ ಅವುಗಳನ್ನು ಬೇರೆ ಮಾಡಿತ್ತು. ಈಗ ಮತ್ತೆ 3 ಮರಿಗಳಿಗೆ ಜನ್ಮ ನೀಡಿರುವ ಈ ತಾಯಿ ಹುಲಿ ಹಳೇ ಮರಿಗಳೊಂದಿಗೂ ಆಗಾಗ ಕಾಣಿಸಿಕೊಳ್ಳುವುದು ವಿಶೇಷ ಎನ್ನುತ್ತಾರೆ ಹವ್ಯಾಸಿ ಛಾಯಾಗ್ರಾಹಕ ಶ್ರೇಯಸ್ ದೇವನೂರ್.
ಸದ್ಯದ ಗಣತಿಯ ಪ್ರಕಾರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕಾಕನಕೋಟೆ ಕಬಿನಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 106 ರಿಂದ 134ರ ವರೆಗೆ ಹುಲಿ ಮತ್ತು ಹುಲಿ ಮರಿಗಳಿವೆ. ಇತ್ತೀಚೆಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಂದ ಹುಲಿ ಬೇಟೆ ಕಡಿಮೆಯಾಗಿರುವುದರಿಂದ ಹುಲಿ ಸಂತತಿ ಹೆಚ್ಚಾಗಿದೆ. ಜೊತೆಗೆ ಈ ಭಾಗದಲ್ಲಿ ಕಳೆದ ವರ್ಷ ಅತಿ ಹೆಚ್ಚು ಮಳೆಯಾಗಿದೆ. ಕೆರೆ ಕಟ್ಟೆಗಳು ತುಂಬಿದ್ದು ಇತರ ವನ್ಯಜೀವಿಗಳ ಸಂತತಿ ಹೆಚ್ಚಾಗಿರುವುದರಿಂದ ಹುಲಿಗಳಿಗೆ ಆಹಾರ ಸಮಸ್ಯೆ ಇಲ್ಲದೆ ಅವುಗಳ ಸಾವಿನ ಪ್ರಮಾಣವು ಸಹ ಕಡಿಮೆಯಾಗಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿ.