ಮೈಸೂರು: ಜಾಮೀನು ಪಡೆದು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿಯೊಬ್ಬನ್ನು ಸೆಲ್ಫಿ ಹಿಡಿದುಕೊಟ್ಟಿದೆ. ತಾನೇ ಸೆಲ್ಫಿ ತೆಗೆದು ಫೇಸ್ಬುಕ್ನಲ್ಲಿ ಹಾಕಿ ಪೊಲೀಸರ ಬಲೆಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ಮಧುಸೂದನ್ ಎಂಬಾತನೇ ಬಂಧಿತ ಆರೋಪಿ. ಖಾಸಗಿ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ಈತ ಕೆಲ ವರ್ಷಗಳ ಹಿಂದೆ ತನ್ನ ಸ್ನೇಹಿತರಾದ ಶ್ರೀರಂಗ ಹಾಗೂ ಅಭಿಷೇಕ್ ಜೊತೆ ಸೇರಿ ಟ್ರೆಂಡಿಂಗ್ ಕಂಪನಿ ಆರಂಭಿಸಿದ್ದ. ಅದರಲ್ಲಿ ಸುಮಾರು ಒಂದು ಕೋಟಿ ರೂಪಾಯಿ ನಷ್ಟವಾಗಿ ಕೈ ಸುಟ್ಟುಕೊಂಡಿದ್ದ.
ವ್ಯಕ್ತಿ ಕೊಲೆಗೈದು ನೆಕ್ಲೆಸ್ ದರೋಡೆ: ಅದೇ ವೇಳೆ ಬೆಂಗಳೂರಿನ ಲಕ್ಕಸಂದ್ರ ಬಡಾವಣೆಯ ಉದಯ ರಾಜ್ಸಿಂಗ್ ಮತ್ತು ಸುಶೀಲಾ ದಂಪತಿ ಡೈಮಂಡ್ ನೆಕ್ಲೇಸ್ ಮಾರಾಟಕ್ಕಿದೆ ಎಂದು ಆನ್ಲೈನ್ನಲ್ಲಿ ಜಾಹೀರಾತು ನೀಡಿದ್ದರು. ಅದನ್ನು ಗಮನಿಸಿದ ಮಧುಸೂದನ್ ಮತ್ತು ಅಭಿಷೇಕ್ ಆ ಡೈಮಂಡ್ ನೆಕ್ಲೇಸ್ ಅನ್ನು ಕಳವು ಮಾಡಲು ಐದು ಜನರೊಂದಿಗೆ ಸೇರಿ ಸಂಚು ರೂಪಿಸಿದ್ದ. ಅಂತೆಯೇ 2014ರ ಮಾರ್ಚ್ 25ರಂದು ಬೆಂಗಳೂರಿನ ಮನೆಗೆ ಹೋಗಿ ತಾವು ಡೈಮಂಡ್ ನೆಕ್ಲೆಸ್ ಖರೀದಿಸುತ್ತೇವೆ ಎಂದು ಹೇಳಿ ದರ ಪ್ರಸ್ತಾಪಿಸಿ ಮಾತನಾಡುತ್ತಿದ್ದಂತೆ ಉದಯ ರಾಜ್ಸಿಂಗ್ರನ್ನು ಕೊಲೆ ಮಾಡಿ ನೆಕ್ಲೆಸ್ ದೋಚಿದ್ದರು.
ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದ ಆಡುಗೋಡಿ ಪೋಲಿಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ, 2017ರ ಮೇ 6ರಂದು ಮಧುಸೂದನ್ಗೆ ಜಾಮೀನು ಸಿಕ್ಕಿತ್ತು. ನಂತರ ಪಾಟ್ನಾಗೆ ತೆರಳಿ ಅಲ್ಲಿಂದ ಪುಣೆಯಲ್ಲಿ ಒಂದು ಸಣ್ಣ ಉದ್ಯೋಗ ಮಾಡಿಕೊಂಡಿದ್ದ. ನಂತರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಈತನಿಗೆ ಹಲವು ಬಾರಿ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿತ್ತು. ಆದರೂ, ಆತ ಪೊಲೀಸರ ಕಣ್ಣುತಪ್ಪಿಸಿ ಅಡಗಿಕೊಂಡಿದ್ದ. ಕೊಲೆ ಪ್ರಕರಣದ ಉಳಿದ ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದ್ದರೂ, ಮಧು ಸಿಕ್ಕಿರಲಿಲ್ಲ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಈತ ಪೀಣ್ಯ ಬಳಿಯ ಮಾಲ್ವೊಂದರಲ್ಲಿ ಸ್ನೇಹಿತನೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದ. ಈ ಫೇಸ್ಬುಕ್ ಪೋಸ್ಟ್ನ ಜಾಡು ಹಿಡಿದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೀಗ ಆರೋಪಿಯು ಬೆಂಗಳೂರಿನ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದಾನೆ.
ಇದನ್ನೂ ಓದಿ: ಉಡುಪಿ: ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಆತ್ಮಹತ್ಯೆ