ಮೈಸೂರು: ಕೆ. ಆರ್ ನಗರ ತಾಲೂಕಿನ ಬೊಮ್ಮೆನಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ಜ್ವರಕ್ಕೆ 9 ವರ್ಷದ ಬಾಲಕಿ ಬಲಿಯಾಗಿದ್ದಾಳೆ.
ಬೊಮ್ಮೆನಹಳ್ಳಿ ಗ್ರಾಮದ ಶಿವನಂಜು ಮಗಳಾದ ಸ್ಪಂದನ(9) ಮೃತ ಬಾಲಕಿ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಕೆ ನಾಲ್ಕನೇ ತರಗತಿ ಓದುತ್ತಿದ್ದಳು. ಕಳೆದ ಮೂರು ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು.
ಹೀಗಾಗಿ, ಪೋಷಕರು ಭೇರ್ಯ ಗ್ರಾಮದ ಖಾಸಗಿ ಕ್ಲಿನಿಕ್ಗೆ ಮಗಳನ್ನು ಚಿಕಿತ್ಸೆಗಾಗಿ ಸೇರಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸ್ಪಂದನ ಸಾವಿಗೀಡಾಗಿದ್ದಾರೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರಪ್ಪ ತಿಳಿಸಿದ್ದಾರೆ.
![9-year-old-girl-died-by-dengue-in-mysore](https://etvbharatimages.akamaized.net/etvbharat/prod-images/13016283_th.jpg)
ಈ ಕುರಿತು ಪ್ರತಿಕ್ರಿಯಿಸಿದ ಅವರು, ಗ್ರಾಮದಲ್ಲಿ ಜ್ವರದಿಂದ ಮೂರು, ನಾಲ್ಕು ಮಕ್ಕಳು ಬಳಲುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಮಾಹಿತಿ ಮೇರೆಗೆ ನಾವು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ತಾ.ಪಂ ಇಓ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಓದಿ: ಹಬ್ಬದ ನಡುವೆ ಬೆಲೆ ಏರಿಕೆ ಶಾಕ್: ಆದರೂ ಖರೀದಿಗೆ ಮುಗಿಬಿದ್ದಿರುವ ಜನತೆ