ಮೈಸೂರು: ಟಿಪ್ಪರ್ ಲಾರಿ ಹರಿದು 18 ಕುರಿಗಳು ಸಾವನ್ನಪ್ಪಿದ್ದು, ಕುರಿಗಾಹಿ ಗಂಭೀರ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಇಂದಿರಾ ನಗರದ ಬಳಿ ಇಂದು (ಗುರುವಾರ) ನಡೆದಿದೆ.
ತುಮಕೂರು ಜಿಲ್ಲೆಯ ಅಲೆಮಾರಿ ಕುರಿಗಾಹಿಗಳು ಕುರಿಗಳನ್ನು ಮೇಯಿಸಲು ಹೋಗುತ್ತಿದ್ದಾಗ, ಬೇಗೂರು ಕಡೆಯಿಂದ ಬಂದ ಡಸ್ಟ್ ತುಂಬಿದ ಟಿಪ್ಪರ್ ಲಾರಿ ವೇಗವಾಗಿ ಬಂದು ಕುರಿಗಳ ಮೇಲೆ ಹರಿದಿದೆ. ಕುರಿಗಾಹಿಯು ಗಂಭೀರವಾಗಿ ಗಾಯಗೊಂಡು ನೆರಳಾಡುತ್ತ ಬಿದ್ದಿದ್ದರು. ಕೂಡಲೇ ಸ್ಥಳೀಯರು ಧಾವಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ. ಸುಮಾರು 18 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 40 ಕುರಿಗಳು ಗಾಯಗೊಂಡಿವೆ. ಟಿಪ್ಪರ್ ಲಾರಿಯ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ.
''ನಾವು ಕುರಿಗಳನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಊರೂರು ಸುತ್ತಿ ಕುರಿಗಳನ್ನು ಮೇಯಿಸಿಕೊಂಡು ಬರುತ್ತಿರುವಾಗ ಲಾರಿಯಿಂದ ನಡೆದ ಅಪಘಾತದಲ್ಲಿ ನಮಗೆ ಸುಮಾರು 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ನಮಗೆ ಸೂಕ್ತ ಪರಿಹಾರ ನೀಡುವ ತನಕ ರಸ್ತೆಯಲ್ಲಿಯೇ ಹೋರಾಟ ಮಾಡುತ್ತೇವೆ'' ಎಂದು ಕುರಿಗಾಹಿಗಳು ಪಟ್ಟುಹಿಡಿದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹುಲ್ಲಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣ, ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸಾವು: ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿದ್ದ 80ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಲಕ್ಕಹಳ್ಳಿ ಗ್ರಾಮದ ಬಳಿ ಇತ್ತೀಚೆಗೆ ನಡೆದಿತ್ತು. ಚಿಕ್ಕಬಳ್ಳಾಪುರ ದಿಂದ ಕೋಲಾರಕ್ಕೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕುರಿಗಳು ಸಾವನ್ನಪಿದ್ದವು. ಹುಸಹುಡ್ಯಾ ನಿವಾಸಿಗಳಾದ ಆಂಜಿನಪ್ಪ, ಮುನಿನಾರಾಯಣ ಹಾಗೂ ದೇವರಾಜ್ಗೆ ಸೇರಿದ್ದ ಕುರಿಗಳು ಇವು. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
"ರೈಲ್ವೆ ಟ್ರ್ಯಾಕ್ ಬಳಿ ಕುರಿಗಳನ್ನು ಮೇಯಿಸುತ್ತಿದ್ದೆವು. ಈ ವೇಳೆ ನಾಯಿಗಳು ಕುರಿ ಹಿಂಡಿನ ಮೇಲೆ ದಾಳಿ ನಡೆಸಿವೆ. ಇದರಿಂದ ಹೆದರಿದ ಕುರಿಗಳು ತಪ್ಪಿಸಿಕೊಳ್ಳಲು ಹಳಿಯತ್ತ ಓಡಿ ಹೋಗಿವೆ. ಇದೇ ಸಮಯದಲ್ಲಿ ಬಂದ ರೈಲು ಕುರಿಗಳ ಮೇಲೆ ಹರಿದಿದೆ. ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ನಾವು ಕುರಿಗಳನ್ನೇ ಆಧರಿಸಿ ಜೀವನ ಮಾಡುತ್ತಿದ್ದೇವೆ. ಒಬ್ಬೊಬ್ಬ ಕುರಿ ಮಾಲೀಕನಿಗೂ ಸುಮಾರು 5 ಲಕ್ಷ ರೂಪಾಯಿ ನಷ್ಟವಾಗಿದೆ" ಎಂದು ಕುರಿಗಳ ಮಾಲೀಕ ಆಂಜಿನಪ್ಪ ತಿಳಿಸಿದ್ದರು.
ಇದನ್ನೂ ಓದಿ: ಕುರಿಗಳಿಗೆ ಕಾರು ಡಿಕ್ಕಿ: ರಸ್ತೆ ಮೇಲೆ ಒದ್ದಾಡಿ ಪ್ರಾಣ ಬಿಟ್ಟ 30 ಕುರಿಗಳು, ಕಂಗಾಲಾದ ಕುರಿಗಾಹಿ