ಮಂಡ್ಯ: ಬಿಜೆಪಿ ಕಷ್ಟ ನೋಡಿ ಅಯ್ಯೋ ಪಾಪ ಅನಿಸುತ್ತಿದೆ. ಬಿಜೆಪಿಗೆ ಯಡಿಯೂರಪ್ಪ ಹಾಗೂ ಅವರ ಮಗ ಅನಿವಾರ್ಯ. ಆದರೆ ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಬಳಿಕ ಅವರ ಮಗನಿಗೆ ಅವಕಾಶ ಕೊಡಬೇಕಿತ್ತು, ಆಗ ಕೊಡಲಿಲ್ಲ. ಈಗ ಬಿಜೆಪಿಗೆ ಬಿಎಸ್‌ವೈ ಕುಟುಂಬ ಅನಿವಾರ್ಯವಾಗಿದೆ ಎಂದು ಹೇಳಿದರು.
ಕಳೆದ 6 ತಿಂಗಳಿಂದ ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಸಿಕ್ಕಿಲ್ಲ. ರಾಜ್ಯಾಧ್ಯಕ್ಷರನ್ನು ಹುಡುಕಿದರೂ ಸಿಗಲಿಲ್ಲ. ಇದೀಗ ಬಿಎಸ್‌ವೈ ಅನಿವಾರ್ಯತೆ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಇದೆ. ಪ್ರೀತಿಯಿಂದ ನೇಮಕ ಮಾಡಿಲ್ಲ ಅನಿವಾರ್ಯತೆಯಿಂದ ಬಿ ವೈ ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದಾರಷ್ಟೇ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಪ್ರೀತಿಯಿಂದ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ , ಅವರಿಗೆ ಅನಿವಾರ್ಯತೆ ಇದೆ. ಸಹಾಯ ಮಾಡಿದ್ದವರನ್ನು ಹೆಚ್ಡಿಕೆ ಎಂದಿಗೂ ನೆನೆಯಲ್ಲ. ಬಿಜೆಪಿಯಲ್ಲಿ ಮನಸ್ತಾಪ ದೊಡ್ಡ ಪ್ರಮಾಣದಲ್ಲಿದೆ. ಎಲ್ಲ ಮನಸ್ಸುಗಳು ಹೊಡೆದು ಹೋಗಿವೆ. ನಮ್ಮದು ರಾಷ್ಟ್ರೀಯ ಪಕ್ಷ, 136 ಗೆದ್ದಿದ್ದೇವೆ. ಅವರು ಗೆಲ್ಲುವುದಕ್ಕೆ ಕಷ್ಟ ಪಡುತ್ತಿದ್ದಾರೆ, ಇನ್ನು ಜೆಡಿಎಸ್ನ ಮಂಜು ಮತ್ತು ಗೌರಿಶಂಕರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಅನೇಕ ಮುಖಂಡರು ಕಾಂಗ್ರೆಸ್‌ಗೆ ಬರಲು ತಯಾರು ಇದ್ದಾರೆ ಎಂದು ತಿಳಿಸಿದರು.
ಇನ್ನು ಯತೀಂದ್ರ ಮಾಜಿ ಎಂಎಲ್‌ಎ ಖಾಲಿ ಇರುವ ಮನುಷ್ಯ ಅಲ್ಲ. ಸಿದ್ದರಾಮಯ್ಯ ವರುಣಾದಲ್ಲಿ ಸ್ಪರ್ಧೆ ಮಾಡಿದ್ದರಿಂದ ಅವರು ಚುನಾವಣೆಗೆ ನಿಂತುಕೊಳ್ಳಲಿಲ್ಲ. ಮೈಸೂರು ಜಿಲ್ಲೆ ಅಥವಾ ಪಕ್ಷದಲ್ಲಿ ಯತೀಂದ್ರ ಪ್ರಮುಖ ಲೀಡರ್. ಮಾಜಿ ಎಂಎಲ್‌ಎಗಳು ಕೆಲಸ ಮಾಡುವುದನ್ನು ತಪ್ಪು ಎನ್ನುವುದಕ್ಕೆ ಆಗುತ್ತಾ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಮಗ ಡಾ.ಯತೀಂದ್ರ ಸೂಪರ್ ಸಿಎಂ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆಸಿದ ಸಚಿವರು, ಮೈಸೂರು ಜಿಲ್ಲೆ ಕೀಳನಪುರ ಗ್ರಾಮದ ಜನಸಂಪರ್ಕ ಸಭೆಯಲ್ಲಿ ಡಾ ಯತೀಂದ್ರ, ತಾನು ನೀಡಿದ ಪಟ್ಟಿಯನ್ನಷ್ಟೇ ಪರಿಗಣಿಸುವಂತೆ ಹೇಳಿದ ವಿಡಿಯೋ ವೈರಲ್ ಆಗಿರುವ ಬಗ್ಗೆ ಉತ್ತರಿಸಿದ ಅವರು, ಇಂತವರು ಲಿಸ್ಟ್ ಆಗಬೇಕು ಎನ್ನುವ ನೇಚರ್ ಯತೀಂದ್ರ ಅವರದ್ದು ಅಲ್ಲ. ವಿಡಿಯೋದಲ್ಲಿ ಯಾವ ವಿಚಾರ ಹೇಳಿದರೋ ಏನೋ ಗೊತ್ತಿಲ್ಲ. ಯಾರು ಆ ವಿಡಿಯೋ ಕಟ್ ಅಂಡ್ ಪೇಸ್ಟ್ ಮಾಡಿದರೋ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಟ್ ಅಂಡ್ ಪೇಸ್ಟ್ ತೋರಿಸುವುದು ಇರುತ್ತದೆ. ಯತೀಂದ್ರ ಒಳ್ಳೆಯ ವ್ಯಕ್ತಿ ಎಂದು ಹೇಳಿದರು.
ಅದೇನು ಅಪಾರಧವಲ್ಲ: ಯತೀಂದ್ರ ಅವರು ಸಾರ್ವಜನಿಕ ಸೇವೆಯಲ್ಲಿ ಇರುವುದು ಅಪರಾಧವಲ್ಲ. ವರುಣಾ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಲಿ ಬಿಡಿ, ಅದರಲ್ಲಿ ತಪ್ಪೇನಿದೆ. ನಮ್ಮ ಕಾಂಗ್ರೆಸ್ ಮುಖಂಡರು ಕೆಲ ಸಮಸ್ಯೆ ಗಮನಕ್ಕೆ ತಂದರೆ ತಪ್ಪೇನು ಇದೆ. ನಮ್ಮಲ್ಲೂ ಕೆಲ ಕಡೆ ಪಿಡಿಒ ಸರಿ ಇಲ್ಲ, ಬೇರೆಯವರನ್ನು ನೇಮಕ ಮಾಡಿ ಎನ್ನುತ್ತಾರೆ. ಅದನ್ನು ನಾವು ತಪ್ಪು ಅನ್ನುವುದಕ್ಕೆ ಆಗುತ್ತದೆಯೇ?. ಸಲಹೆ ಕೊಡುವುದರಲ್ಲಿ ತಪ್ಪೇನಿಲ್ಲ. ವೈಎಸ್‌ಟಿ ಟ್ಯಾಕ್ಸ್ ಎಂದು ವಿರೋಧ ಪಕ್ಷದವರು ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಹೆಚ್‌ಡಿಕೆ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪಾಸ್ಟ್ ಇಸ್ ಪಾಸ್ಟ್. ಅವರಂತೆ ವಿಚಾರ ಸಿಕ್ಕಿದರೆ ನಾವು ಎಳೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯುತ್ ಸರಬರಾಜು ವಿಚಾರದಲ್ಲಿ ತಪ್ಪಾಗಿದೆ. ಆದರೆ, ನಾನು ರೈತರ ಭೂಮಿ ಕಬಳಿಸಿಲ್ಲ ಎಂದು ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಭೂಮಿ ಕಬಳಿಸಿರುವವರು. ವೈಟ್ ಪೇಪರ್ ಡಿಕ್ಲೇರ್ ಮಾಡಲಿ ಬಿಡಿ. ಒಬ್ಬ ಮನುಷ್ಯ ಆಸ್ತಿ ಮಾಡುವುದಕ್ಕೆ ಇತಿಮಿತಿ ಇರುತ್ತದೆ. ರಾಜಕೀಯವಾಗಿ ಬಂದ ಕುಟುಂಬ ಎಷ್ಟು ಆಸ್ತಿ ಮಾಡಿದೆ ಎಂದು ತನಿಖೆ ಆಗಲಿ. ಕೇಂದ್ರ ಸರ್ಕಾರದೊಂದಿಗೆ ಹೆಚ್ಡಿಕೆ ಇದ್ದು, ಅವರು ತನಿಖೆ ಮಾಡಿಸಲಿ. ಎಲ್ಲ ಪಕ್ಷದ ಪ್ರಮುಖ ರಾಜಕಾರಣಿಗಳ ಮೇಲೆ ತನಿಖೆ ಆಗಲಿ. ಯಾರ್ಯಾರೂ ಎಷ್ಟು ಆಸ್ತಿ ಮಾಡಿದ್ದಾರೆಂದು ಕುಮಾರಸ್ವಾಮಿಯಿಂದ ಜನರಿಗೆ ಗೊತ್ತಾಗಲಿ ಎಂದು ತಿಳಿಸಿದರು.
ಇದನ್ನೂಓದಿ:ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋ ನೋಡಿಲ್ಲ, ಕೇಳಿಲ್ಲ: ಸಚಿವ ಡಾ.ಎಚ್ ಸಿ.ಮಹಾದೇವಪ್ಪ