ಮಂಡ್ಯ: ಮೈಸೂರು ಮಹಾರಾಜ ಯದುವೀರ್ ಒಂದುಕಾಲು ರೂಪಾಯಿ ಹರಕೆಯನ್ನು ಇಲ್ಲಿನ ಹೊಳೆ ಆಂಜನೇಯ ಸ್ವಾಮಿಗೆ ಕಟ್ಟಿಕೊಂಡಿದ್ದಾರೆ. ರಾಜ್ಯದಲ್ಲಿ ತಲೆದೋರಿರುವ ನೆರೆ ಕಡಿಮೆಯಾಗಿ ಜನರಿಗೆ ನೆಮ್ಮದಿ ಸಿಗಲಿ ಎಂದು ದೇವರಲ್ಲಿ ಅವರು ಪಾರ್ಥನೆ ಸಲ್ಲಿಸಿದರು.
ಇಂದು ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮುಂಜಾನೆಯೇ ಭೇಟಿ ನೀಡಿದ ಯದುವೀರ್, ರಥ ಎಳೆದು ನಂತರ ಮೂರ್ತಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಮಹಾರಾಜರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಸ್ವಾಗತದ ನಂತರ ದೇವರ ಮೂರ್ತಿ ಮುಂದೆ ನಿಂತು ಹರಕೆ ಕಟ್ಟಿಕೊಂಡ ಯದುವೀರ್, ನಂತರ ಪೂಜೆ ಸಲ್ಲಿಸಿದರು. ಹರಕೆ ರೂಪದಲ್ಲಿ ಒಂದೂ ಕಾಲು ರೂಪಾಯಿಯನ್ನು ದೇವರಿಗೆ ಸಲ್ಲಿಸಿದರು. ಇಲ್ಲಿ ಒಂದುಕಾಲು ರೂಪಾಯಿ ಹರಕೆ ಕಟ್ಟಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಹರಕೆ ಕಟ್ಟಿಕೊಂಡಿದ್ದಾರೆ.
ನಂತರ ಮಾತನಾಡಿದ ಅವರು, ಕೆ.ಆರ್.ಎಸ್ ತುಂಬಿರೋದು ತುಂಬಾ ಸಂತಸ ತಂದಿದೆ. ಆದರೆ, ರಾಜ್ಯದಲ್ಲಿ ತಲೆದೋರಿರುವ ನೆರೆ ಆತಂಕ ತಂದಿದೆ. ಅದು ಕಡಿಮೆ ಆಗಲಿ ಎಂದು ಅರಮನೆಯಿಂದಲೇ ಪಾರ್ಥನೆ ಸಲ್ಲಿಸಿದ್ದೇನೆ ಎಂದರು. ಇನ್ನು ಅಣೆಕಟ್ಟೆ ತುಂಬಿರೋದರಿಂದ ರೈತರಿಗೆ ಅದರಲ್ಲೂ ಮಂಡ್ಯ, ಮೈಸೂರು ಭಾಗದ ರೈತರಿಗೆ ಅನುಕೂಲವಾಗಿದೆ. ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಾಗುವುದು ಎಂದರು.