ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪರನ್ನು ಭೇಟಿಯಾದರು. ಈ ವೇಳೆ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು.
ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ ಸುಮಲತಾ, ಚುನಾವಣೆ ವೇಳೆ ಬಿಜೆಪಿ ಬೆಂಬಲ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಮಾತನಾಡಿದ ಸುಮಲತಾ, ಸುನಾಮಿ ರೀತಿ ಬಿಜೆಪಿ ದೇಶದಲ್ಲಿ ಗೆದ್ದಿದೆ. ಬಿಜೆಪಿ ಪಕ್ಷ ಮಂಡ್ಯದಲ್ಲಿ ನನಗೂ ಬೆಂಬಲ ಸೂಚಿಸಿದೆ. ಹೀಗಾಗಿ ಕೃತಜ್ಞತೆ ತಿಳಿಸಲು ಬಂದಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಈ ವೇಳೆ ಬಿಜೆಪಿಗೆ ಬೆಂಬಲ ಸೂಚಿಸಬಹುದು. ಆದರೆ ಪಕ್ಷ ಸೇರ್ಪಡೆ ಸಾಧ್ಯವಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಕ್ಷೇತ್ರದ ಜನರ ಅಭಿಪ್ರಾಯ ಆಧಾರದಲ್ಲಿ ಕೆಲಸ ಮಾಡುವೆ ಎಂದು ತಿಳಿಸಿದರು.
ಮಂಡ್ಯ ರೈತರ ಬೆಳೆಗೆ ನಾಲೆ ಮೂಲಕ ನೀರು ಹರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಖಂಡಿತ ಶಾಸಕರ ಮಾತಿನಂತೆ ನಾನು ನೀರು ಕೊಡಿಸಲು ಶ್ರಮಿಸುವೆ. ರೈತರಿಗಾಗಿ ಎಷ್ಟು ಬೇಕಾದರೂ ಶ್ರಮಿಸಲು ನಾನು ಸದಾ ಸಿದ್ಧ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಯಡಿಯೂರಪ್ಪ, ಮಂಡ್ಯದಲ್ಲಿ ಸುಮಲತಾ ಗೆಲುವು ಪಡೆದಿರೋದು ಖುಷಿ ತಂದಿದೆ. ಮುಖ್ಯಮಂತ್ರಿ ಕೋಟಿ ಕೋಟಿ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ. ಮೈಸೂರಿನಲ್ಲಿ ಭಾಷಣದಲ್ಲೂ ಪ್ರಧಾನಿಗಳು ಸುಮಲತಾ ಅವರ ವಿಚಾರ ಪ್ರಸ್ತಾಪ ಮಾಡಿದ್ದರು. ಹೀಗಾಗಿ ಅವರ ಗೆಲುವು ಖುಷಿ ತಂದಿದೆ ಎಂದು ತಿಳಿಸಿದರು.
ಇನ್ನು ಬಿಜೆಪಿ ಸೇರ್ಪಡೆ ವಿಚಾರ ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತಿಳಿಸುವುದಾಗಿ ಸುಮಲತಾ ಹೇಳಿದ್ದಾರೆ ಎಂದರು.