ಮಂಡ್ಯ: ಮದ್ದೂರು ತಾಲೂಕಿನ ಹನಕೆರೆ ಗ್ರಾಮದಲ್ಲಿ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮಸ್ಥರು, ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಹೆದ್ದಾರಿಯ ಎರಡು ಕಡೆಗಳಲ್ಲಿ ಎತ್ತಿನಗಾಡಿಗಳು, ನೇಗಿಲು ಮತ್ತು ಜಾನುವಾರುಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದ ಕಾರಣ 2 ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕೆಳಸೇತುವೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪತ್ರ ಕೊಡಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಈ ವೇಳೆ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಕೆಳಸೇತುವೆ ನಿರ್ಮಾಣಕ್ಕೆ ಈ ಹಿಂದೆ ಪ್ರಾಧಿಕಾರಕ್ಕೆ ಸಲ್ಲಿಸಿದ ಪತ್ರ ತೋರಿಸಿದರು. ಪತ್ರವನ್ನು ಕಿತ್ತುಕೊಂಡ ಪ್ರತಿಭಟನಾಕಾರರು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸುತ್ತಮುತ್ತಲಿನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೆಳಸೇತುವೆ ನಿರ್ಮಿಸಿಲ್ಲ. ತಕ್ಷಣವೇ ನಮ್ಮ ಗ್ರಾಮದ ಬಳಿಯೇ ಕೆಳಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು, ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರು ಕಿವಿಗೊಡದ ಜನರು ಹೋರಾಟ ಮುಂದುವರೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಂಡ್ಯ ಎಸ್ಪಿ ಎನ್ ಯತೀಶ್, ಪ್ರತಿಭಟನಾಕಾರರಿಗೆ ರಸ್ತೆ ತಡೆ ನಿಲ್ಲಿಸುವಂತೆ ಮನವಿ ಮಾಡಿದರು. ಮಾತು ಕೆಳದ ಪ್ರತಿಭಟನಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ರೈತ ಮುಖಂಡರಾದ ಮಧುಚಂದನ್ ಹಾಗೂ ಪ್ರಸನ್ನ ಗೌಡರನ್ನ ವಶಕ್ಕೆ ಪಡೆದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನಕಾರ ಸುರೇಶ್ ಮಾತನಾಡಿ, ಈಗ ನಿರ್ಮಿಸಿರುವ ಕೆಳಸೇತುವೆ ನಮ್ಮ ಗ್ರಾಮದಿಂದ ತುಂಬ ದೂರದಲ್ಲಿದೆ. ಅಲ್ಲಿ ಈಗಾಗಲೇ ಕಳ್ಳತನ ಪ್ರಕರಣಗಳು ನಡೆದಿವೆ. ರಾತ್ರಿ ವೇಳೆಯಲ್ಲಿ ಹೆಣ್ಣು ಮಕ್ಕಳ ಸಂಚಾರಕ್ಕೆ ಮತ್ತು ಸುತ್ತಮುತ್ತಲಿನ ಹತ್ತು ಗ್ರಾಮಗಳ ಗ್ರಾಮಸ್ಥರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಹಿಂದೆ ಸಂಬಂಧಪಟ್ಟ ಅಧಿಕಾರಗಳಿಗೆ, ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದರು ಯಾರು ಸರಿಯಾಗಿ ಸ್ಪಂದಿಸಿಲ್ಲ. ಮಲ್ಲಯ್ಯನ ದೊಡ್ಡಿ ಮತ್ತು ಹನಕೆರೆ ಬಳಿ ಕೆಳಸೇತುವೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಎಸ್ಪಿ ಎನ್. ಯತೀಶ್ ಮಾತನಾಡಿ, ಗ್ರಾಮಸ್ಥರು ಕೆಳಸೇತುವೆ ನಿರ್ಮಿಸಬೇಕು ಎಂದು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಾವು ಅವರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುಮಾಡಿಕೊಟ್ಟಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದೆಹಲಿಯಿಂದ ಪತ್ರ ತರಿಸಿಕೊಂಡು ಗ್ರಾಮದ ಬಳಿ ಕೆಳಸೇತುವೆ ನಿರ್ಮಿಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ. ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿ, ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ ಎಂದರು.
ಇನ್ನು, ಗ್ರಾಮಸ್ಥರ ಪ್ರತಿಭಟನೆ ಬಿಸಿಗೆ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದೆಹಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರಾಮದ ಬಳಿ ಕೆಳೆಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ಪತ್ರ ತೋರಿಸಿ, ಅನುಮೋದನೆ ಪಡೆದು ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ ನಂತರ ಹೋರಾಟಗಾರರು ಪ್ರತಿಭಟನೆ ಕೈಬಿಟ್ಟರು.
ಇದನ್ನೂ ಓದಿ:ಮಂಡ್ಯ ಉಸ್ತುವಾರಿಗೆ ಹಿಂದೇಟು; ಗೋಪಾಲಯ್ಯ ಪರ ಬ್ಯಾಟ್ ಬೀಸಿದ ಸಚಿವ ನಾರಾಯಣ ಗೌಡ