ಮಂಡ್ಯ: ಅಂತರ್ಜಾಲ ಪ್ರಪಂಚಕ್ಕೆ ಕಾಲಿಟ್ಟಿರುವ ರಾಜ್ಯ ರೈತ ಸಂಘ ವೆಬ್ ಪುಟ ತೆರೆದಿದೆ. ಈ ಮೂಲಕ ಸಂಘಟನೆಯ ಹೋರಾಟ ಸ್ವರೂಪದ ಜೊತೆ ರೈತರಿಗೆ ಮಹತ್ವದ ಮಾಹಿತಿಯನ್ನು ಒದಗಿಸಲು ಮುಂದಾಗಿದೆ.
ರಾಜ್ಯ ರೈತ ಸಂಘ ತನ್ನ ನೂತನ ಪ್ರಾಯೋಗಿಕ ವೆಬ್ ಪುಟಕ್ಕೆ ರೈತರ ಹುತಾತ್ಮ ದಿನದಂದು ಚಾಲನೆ ನೀಡಿದ್ದು, ಇನ್ನು ಮುಂದೆ ಅಂತರ್ಜಾಲದ ಮೂಲಕವೇ ರೈತರಿಗೆ ಮಾಹಿತಿ ನೀಡಲು ಸಿದ್ದತೆ ಮಾಡಿಕೊಂಡಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ವೆಬ್‌ಸೈಟ್ ಪುಟ ತೆರೆದುಕೊಳ್ಳುತ್ತಿದ್ದಂತೆ ಸಂಘಟನೆಯ ಮೂಲ ಉದ್ದೇಶ ಮತ್ತು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡುತ್ತದೆ.
ತನ್ನ ಪೊಟೋ ಗ್ಯಾಲರಿಯಲ್ಲಿ ಪ್ರಮುಖವಾಗಿ ಪ್ರೊ.ಕೆ.ಎಸ್.ನಂಜುಂಡಸ್ವಾಮಿ ಹಾಗೂ ಕೆ.ಎಸ್. ಪುಟ್ಟಣ್ಣಯ್ಯನವರು ಹೋರಾಟ ಮಾಡಿದ ಸಂದರ್ಭದ ಚಿತ್ರಗಳನ್ನು ಪ್ರಕಟ ಮಾಡಿದೆ. ದರ್ಶನ್ ಎಂಬುವವರು ಈ ವೆಬ್ ಪೇಜ್ ಕ್ರಿಯೇಟ್ ಮಾಡಿ ಡಿಸೈನ್ ಮಾಡಿದ್ದು, ನಿರ್ವಹಣೆಯನ್ನೂ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ವೆಬ್ ಪೇಜ್‌ನಲ್ಲಿ ಮಾರುಕಟ್ಟೆ ವಾಸ್ತವ ಚಿತ್ರಣ, ಬೆಳೆಗಳ ಬೆಲೆ, ಯಾವ ಬೆಳೆ ಬೆಳೆದರೆ ಸೂಕ್ತ, ಬೆಳೆಗಳಿಗೆ ಬರುವ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮ, ಔಷಧೋಪಚಾರ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಾಗಲಿವೆ.