ಮಂಡ್ಯ: ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಉತ್ತರ ದ್ವಾರದ ಮುಂಭಾಗ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೀರು ಬಿಡಲು ಆದೇಶ ನೀಡಿದ ಕಾವೇರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಉತ್ತರ ಭಾಗದ ಜಲಾಶಯದ ಬಳಿ ಮಲಗಿ ಪ್ರತಿಭಟನೆ ಮಾಡಿದರು. ಮಲಗಿ ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್ರನ್ನು ಭದ್ರತೆಗಿದ್ದ ಪೊಲೀಸರು ವಶಕ್ಕೆ ಪಡೆದು ಹೊರ ಕರೆತಂದರು.
ನಂತರ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರದ ರಚನೆ ರಾಜ್ಯಕ್ಕೆ ಮರಣ ಶಾಸನ. ಅದನ್ನ ವಿರೋಧಿಸುವುದಾಗಿ ಹೇಳಿ ಹಿಂದಿನ ಸರ್ಕಾರ ಹೇಳಿತ್ತು. ಈಗ ನಮ್ಮ ಅಧಿಕಾರಿಗಳನ್ನೇ ಪ್ರಾಧಿಕಾರದ ಸಭೆಗೆ ಕಳಿಸುತ್ತಿದೆ. ಪ್ರಾಧಿಕಾರ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ಪ್ರಾಧಿಕಾರವು ತಮಿಳುನಾಡಿನ ಕೈಗೊಂಬೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿನ ಹಿತಕ್ಕಾಗಿ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ. ನೀರು ಬಿಡುತ್ತಿರೋದು ಅಕ್ಷಮ್ಯ ಅಪರಾಧ. ಅಣೆಕಟ್ಟು, ಕೆರೆ, ಕಟ್ಟೆಗಳಲ್ಲೂ ನೀರಿಲ್ಲ. ಅಂತದರಲ್ಲೂ ಪ್ರಾಧಿಕಾರ ನೀರು ಬಿಡುವಂತೆ ಹೇಳಿದೆ. ಅದರ ಆದೇಶವನ್ನ ರಾಜ್ಯ ಸರ್ಕಾರ ಒಪ್ಪಬಾರದು. ಯಾವ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯ ಮಾಡಿದರು.
ಮೇಕೆದಾಟು ಯೋಜನೆ ಸ್ಥಗಿತ ಸರಿಯಲ್ಲ. ಕೂಡಲೇ ಮೇಕೆದಾಟು ಯೋಜನೆ ಆರಂಭಿಸಬೇಕು. ಯೋಜನೆ ಆರಂಭಕ್ಕೆ ರಾಜ್ಯ ಸರ್ಕಾರಕ್ಕೆ 1 ವಾರದ ಗಡುವು ನೀಡಿ, ವಾರದೊಳಗೆ ಯೋಜನೆ ಆರಂಭಿಸದಿದ್ದರೆ ನಾವೇ ಶಂಕುಸ್ಥಾಪನೆ ಮಾಡುತ್ತೇವೆ ಎಂದಿ ಎಚ್ಚರಿಸಿದ ಅವರು, ಟಿಪ್ಪು ದೇಶ ಕಂಡ ಅಪ್ರತಿಮ ವೀರ. ಸಂಸತ್ ಮುಂದೆ ಟಿಪ್ಪು ಪ್ರತಿಮೆ ರಚಿಸಬೇಕು. ಟಿಪ್ಪು ಜಯಂತಿ ರದ್ಧತಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.