ಚಿಕ್ಕಮಗಳೂರು/ ಮಂಡ್ಯ/ ಹಾವೇರಿ : ಉಡುಪಿಯಲ್ಲಿ ಹುಟ್ಟಿಕೊಂಡಿದ್ದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇದೀಗ ಚಿಕ್ಕಮಗಳೂರು, ಮಂಡ್ಯ, ಹಾವೇರಿ ಜಿಲ್ಲೆಗೂ ಕಾಲಿಟ್ಟಿದ್ದು, ಕರ್ನಾಟಕದಲ್ಲಿ ಕಿಡಿ ಹಚ್ಚಿಸಿದೆ.
ಇಂದು ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿ ಆಗಮಿಸಿದರು. ಹಿಜಾಬ್ ತೆಗೆಯುವವರೆಗೂ ನಾವು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುತ್ತೇವೆ. ಸಮಾನತೆಯೆಂದರೆ ಎಲ್ಲರಿಗೂ ಸಮಾನವಾಗಿರಬೇಕು. ಅವರಿಗೆ ಅವರ ಧರ್ಮ ಹೆಚ್ಚಾದರೆ, ನಮಗೆ ನಮ್ಮ ಧರ್ಮ ಹೆಚ್ಚು. ಆದ್ದರಿಂದ ನಾವು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗುತ್ತೇವೆ ಎಂದರು.
ಮತ್ತೊಂದೆಡೆ, ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೂರಾರು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿ ಪ್ರತಿಭಟನೆ ನಡೆಸಿದರು. ಡಿಸಿ ಕಚೇರಿ ಬಳಿ ಸಮಾವೇಶಗೊಂಡ ನೂರಾರು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ.
ಈ ಹಿಂದೆಯೂ ಸಹ ನಾವು, ನಮ್ಮ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ಆದರೆ, ಈ ಸರ್ಕಾರ ಬಂದ ಮೇಲೆ ಹಿಜಾಬ್ ಧರಿಸುವುದನ್ನ ಒಂದು ವಿವಾದವಾಗಿ ಮಾರ್ಪಡಿಸಿದೆ. ಇದರಿಂದ ನಮ್ಮ ಮೂಲಭೂತ ಹಕ್ಕು ಹಾಗೂ ಮುಸ್ಲಿಂ ಹೆಣ್ಣುಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಉದ್ದೇಶವಿದೆ ಎಂದರು.
ಓದಿ: ಹಿಜಾಬ್ - ಕೇಸರಿ ಶಾಲು ವಿವಾದ: ಕೇಸರಿ ಶಾಲು ಧರಿಸಿ ಬಂದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು
ಸಿಎಂ ತವರು ಜಿಲ್ಲೆಗೆ ಕಾಲಿಟ್ಟ ಹಿಜಾಬ್ vs ಕೇಸರಿ ಶಾಲು ವಿವಾದ: ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಿದ ಬಳಿಕವೂ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜ್ ಕ್ಯಾಂಪಸ್ಗೆ ಕಾಲಿಟ್ಟಿದ್ದಾರೆ.
ಹಾವೇರಿ ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಡಿಗ್ರಿ ಕಾಲೇಜಿಗೆ 50ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಆಗಮಿಸಿದ್ದರು. ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಜೈ ಶ್ರೀರಾಮ್, ಜೈ ಶಿವಾಜಿ ಎಂದು ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ಕಾಲೇಜ್ ಗೇಟ್ ಬಂದ್ ಮಾಡಿದ ಸಿಬ್ಬಂದಿ, ನಂತರ ವಿದ್ಯಾರ್ಥಿಗಳನ್ನ ಕಾಲೇಜ್ ಒಳಗೆ ಬಿಟ್ಟರು. ವಿಷಯ ತಿಳಿಯುತ್ತಿದ್ದಂತೆ ಕಾಲೇಜ್ಗೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ನಾಗಮ್ಮ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು.
ಕಾಫಿನಾಡಿನಲ್ಲಿ ತಾರಕಕ್ಕೇರಿದ ಹಿಜಾಬ್ ವಿವಾದ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ ಲಕ್ಷಣಗಳು ಕಾಣಿಸುತ್ತಿದೆ. ಇಂದು ಕೂಡ ನಗರದ ಐ ಡಿ ಎಸ್ ಜಿ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆ ಕಾಲೇಜ್ಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ.