ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ಹೆಚ್ಡಿಕೆ ಗೆಳೆಯರ ಬಳಗದ ವತಿಯಿಂದ ಮಳವಳ್ಳಿ ತಾಲೂಕಿನ ನಡುಕಲುಪುರ ಗೇಟ್‌ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ನಡೆದ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಚಾಲನೆ ನೀಡಿದರು.
ಗ್ರಾಮೀಣ ಕ್ರೀಡೆಗಳನ್ನು ಪೋಷಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಗಾಗಿ ತಾವು ಸಾಕಿದ ಎತ್ತುಗಳನ್ನು ಜನರು ತಂದಿದ್ದರು. ಇದರಲ್ಲಿ ಮಂಡ್ಯ, ಹಾಸನ, ಚಿಕ್ಕಮಗಳೂರು, ತಮಿಳುನಾಡಿನ ಹೊಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ 80ಕ್ಕೂ ಹೆಚ್ಚು ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಇನ್ನು ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಜೋಡಿ ಎತ್ತುಗಳು ಮುನ್ನುಗ್ಗುತ್ತಿದ್ದವು. ಬಿರುಗಾಳಿಯ ರಭಸದಂತೆ ಓಡುತ್ತಿದ್ದ ಎತ್ತುಗಳ ಓಟ ನೆರೆದಿದ್ದ ಪ್ರೇಕ್ಷಕರ ಮೈ ರೋಮಾಂಚನ ಗೊಳಿಸುತ್ತಿತ್ತು. ಒಮ್ಮೊಮ್ಮೆ ಅಡ್ಡಾದಿಡ್ಡಿ ಓಡುತ್ತಿದ್ದ ಎತ್ತುಗಳು ಜನರನ್ನೇ ಭಯದಿಂದ ಅತ್ತಿತ್ತ ಓಡುವಂತೆ ಮಾಡಿದ್ದವು.
ಇನ್ನೂ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಎತ್ತುಗಳಿಗೆ ಲಕ್ಷ, ಲಕ್ಷ ಬಹುಮಾನ ನೀಡಲಾಯಿತು. ಮೊದಲ ಬಹುಮಾನವಾಗಿ 1ಲಕ್ಷ, 2ನೇ ಬಹುಮಾನವಾಗಿ 75 ಸಾವಿರ ಹಾಗೂ 3ನೇ ಬಹುಮಾನವಾಗಿ 50 ಸಾವಿರ ನಗದು ನೀಡಿ ವಿಜೇತ ಎತ್ತುಗಳ ಮಾಲೀಕರನ್ನು ಗೌರವಿಸಲಾಯಿತು.