ಮಂಡ್ಯ: ಬಿಜೆಪಿ ಸರ್ಕಾರ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ್ದು, ನೂತನ ಅಧ್ಯಕ್ಷ ಶ್ರೀನಿವಾಸ್ ಅಧಿಕಾರ ವಹಿಸಿಕೊಂಡರು.
ನೂತನ ಅಧ್ಯಕ್ಷ ಶ್ರೀನಿವಾಸ್ ಕಚೇರಿಗೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ನಂತರ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು. ಎರಡು ವರ್ಷಗಳ ನಂತರ ಅಧ್ಯಕ್ಷರ ನೇಮಕಾತಿ ನಡೆದಿದೆ. ಹೊಸ ಅಧ್ಯಕ್ಷರ ಮೇಲೆ ಹಲವು ನಿರೀಕ್ಷೆಗಳು ಇವೆ.
ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್, ಈಗಾಗಲೇ ನಿವೇಶನ ಕೋರಿ 26 ಸಾವಿರ ಅರ್ಜಿಗಳು ಬಂದಿವೆ. ಅವುಗಳನ್ನು ವಿಲೇವಾರಿ ಮಾಡಲು ಕಾನೂನಾತ್ಮಕವಾಗಿ ಪ್ರಯತ್ನ ಮಾಡಲಾಗುವುದು. ಹೊಸ ಬಡಾವಣೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಾಥ್ ನೀಡಲಿದ್ದು, ಪಿಪಿಪಿ ಯೋಜನೆ ಹಾಗೂ ರೈತರನ್ನೂ ಬಡಾವಣೆ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವುದಾಗಿ ಹೇಳಿದರು.