ಮಂಡ್ಯ: ಸೋಲಬೇಕಾ ನರೇಂದ್ರ ಮೋದಿ ಅವರು..? ಎಂದು ಪ್ರಶ್ನೆ ಮಾಡುವ ಮೂಲಕ ಮತ್ತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನರೇಂದ್ರ ಮೋದಿ ಜಪ ಮಾಡಿದ್ದಾರೆ
ಮಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಗ್ರಾ.ಪಂ ಸದಸ್ಯರಿಗೆ ಅಭಿನಂದನೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಸ್ವಾಮಿ ಸೋಲಬೇಕಾ ಎನ್ನುವ ಬದಲು, ಸೋಲಬೇಕಾ ನರೇಂದ್ರ ಮೋದಿ ಎಂದು ಹೇಳಿದ ಸಿದ್ದು ಮತ್ತೆ ಮೋದಿಯನ್ನು ನೆನಪಿಸಿಕೊಂಡಿದ್ದಾರೆ.
ಕಳೆದ ಚುನಾವಣೆ ಪ್ರಚಾರದ ವೇಳೆಯೂ ನರೇಂದ್ರ ಸ್ವಾಮಿ ಬದಲು ನರೇಂದ್ರ ಮೋದಿ ಎಂದಿದ್ದ ಸಿದ್ದರಾಮಯ್ಯ ಪದೇ ಪದೇ ಮೋದಿ ಹೆಸರೇಳಿದ್ದಾರೆ. ಇನ್ನೂ ಬಿಜೆಪಿ ಅವ್ರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಅವಧಿ ಎರಡೂವರೆ ವರ್ಷಕ್ಕೆ ಇಳಿಸಿದ್ದಕ್ಕೆ ನಮ್ಮ ವಿರೋಧವಿದೆ ಎಂದ ಅವರು, 5ವರ್ಷ ಪೂರ್ಣ ಅವಧಿ ಇದ್ರೆ ಮಾತ್ರ ಅವರು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.
ವಿಕೇಂದ್ರೀಕರಣ, ಮಹಿಳೆಯರು, ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು ಎಂದು ಬಿಜೆಪಿ ಯಾವತ್ತೂ ಹೋರಾಡಿಲ್ಲ. ಆದ್ರೆ ದೇವೇಗೌಡರು ಹೇಳುತ್ತಾರೆ- ನಾನು ಹಿಂದುಳಿದವರಿಗೆ ಮೀಸಲಾತಿ ಕೊಟ್ಟೆ ಅಂತ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು, ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಎಂದು ಸಮರ್ಥಿಸಿಕೊಂಡರು.
73, 74ನೇ ತಿದ್ದುಪಡಿ ಮೂಲಕ ಮೀಸಲಾತಿ ನೀಡಿದ್ದು ಕಾಂಗ್ರೆಸ್‌ನವರು. ಪಂಚಾಯತ್ ವ್ಯವಸ್ಥೆಯಲ್ಲಿ ಬಿಜೆಪಿ ಜೆಡಿಎಸ್‌ನವರ ಯಾವ ಕೊಡುಗೆಯೂ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ನವರು ಸುಳ್ಳು ಹೇಳುತ್ತಾರೆ. ಆದ್ರೆ ಸತ್ಯ ತಿಳಿಸಬೇಕಾದವರು ಕಾಂಗ್ರೆಸ್‌ನವರು ಮಾತ್ರ. ಕಾಂಗ್ರೆಸ್ ಸತ್ಯ ತಿಳಿಸದೆ ಅಧಿಕಾರ ಕಳೆದುಕೊಂಡಿದೆ. ಸತ್ಯ ಹೇಳದೆ ಇರುವುದೇ ನಮ್ಮ ಕಾರ್ಯಕರ್ತರ ಕೊರತೆ ಇದೆ ಎಂದರು.
ನಾನು ಸಿಎಂ ಆಗಿದ್ದಾಗ ಜನರಿಗೆ 7 ಕೆಜಿ ಅಕ್ಕಿ ನೀಡ್ತಿದ್ದೆ. ಆದ್ರೆ ಯಡಿಯೂರಪ್ಪ ಅವರು 5 ಕೆಜಿಗೆ ಇಳಿಸಿದ್ದಾರೆ. ಮುಂದಿನ ದಿನಗಳಲ್ಲಿ 3 ಕೆಜಿಗೆ ಇಳಿಸ್ತಾರೆ. ನಂತರ ಅಕ್ಕಿ ನೀಡೋದನ್ನ ನಿಲ್ಲಿಸೇ ಬಿಡ್ತಾರೆ. ಮುಂದೆ ನಮ್ಮ ಸರ್ಕಾರ ಬಂದ್ರೆ ಜನರಿಗೆ ತಲೆಗೆ 10 ಕೆಜಿ ನೀಡ್ತಿನಿ ಎಂದು ಆಶ್ವಾಸನೆ ನೀಡಿದ ಅವರು, ಎಷ್ಟೆ ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳಿದರು.
ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ನರೇಂದ್ರ ಸ್ವಾಮಿ ಶಾಸಕ ಆಗ್ತಾರೆ, ಮಾಡ್ತೀರಾ ಅಲ್ವಾ..? ಎಂದು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ನರೇಂದ್ರ ಮೋದಿ ಕಂಡ್ರೆ ಯಡಿಯೂರಪ್ಪ ಗಡ ಗಡ ನಡಗುತ್ತಾನೆ. GST ಹಣ ಕೇಳುವ ಧೈರ್ಯ ಇವರು ಮಾಡಲಿಲ್ಲ. ಯಡಿಯೂರಪ್ಪನಿಗೆ ಧಮ್ ಇಲ್ಲ. ಹೇಡಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಟೀಕೆ ಮಾಡಿದರು.
ನಿಮ್ಮ ಶಿಫಾರಸ್ಸು ನಾನು ಒಪ್ಪಲ್ಲ, ಹಣ ಕೊಡಲ್ಲ ಎಂದಿದ್ದಾರೆ ನಿರ್ಮಲಾ ಸೀತಾರಾಮನ್. ಯಡಿಯೂರಪ್ಪ ನಿರ್ಮಲಾ ಮನೆಮುಂದೆ ಹೋಗಿ ಕೇಳಿದ್ದಾರ.. ಎಂದು ಪ್ರಶ್ನೆ ಮಾಡಿದ ಅವರು, ಈ ತರಹದ ಸಿಎಂ ರಾಜ್ಯದಲ್ಲಿ ಇರಬೇಕಾ.. ಕಿತ್ತು ಎಸೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಚ್ಛೆದಿನ್ ಆಯೇಗಾ ಎನ್ನುತ್ತಾರೆ. ಆದರೆ ಕಹಾ ಹೇ ಅಚ್ಛೆದಿನ್, ಕಬ್ ಆಯೇಗಾ ಮೋದಿ..? ಕಾಂಗ್ರೆಸ್ ಕಾಲದಲ್ಲಿ ಪೆಟ್ರೋಲ್ ಕಡಿಮೆ ಇತ್ತು. ಕಚ್ಚಾ ತೈಲ ಬೆಲೆ ಹೆಚ್ಚಿದ್ರು ಕಡಿಮೆ ದರದಲ್ಲಿ ಕೊಡಲಾಗ್ತಿತ್ತು. ಆದ್ರೀಗ ಕಚ್ಚಾ ತೈಲ ಬೆಲೆ ಕಡಿಮೆ ಇದ್ರೂ ದರ ಹೆಚ್ಚಿಸಲಾಗಿದೆ. ಇದೇನಾ ಅಚ್ಛೆ ದಿನ್..? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರು.