ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ದಿನೇ ದಿನೇ ಚುನಾವಣಾ ಕಣ ರಂಗೇರುತ್ತಿದೆ. ಮೂರು ಪಕ್ಷದ ಅಭ್ಯರ್ಥಿಗಳ ಪರ ರಾಷ್ಟ್ರ ಹಾಗೂ ರಾಜ್ಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಮಂಡ್ಯದಲ್ಲಿ ತಮ್ಮ ಅಭ್ಯರ್ಥಿ ಗಣಿಗ ರವಿಕುಮಾರ್ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಮಂಡ್ಯದ ಬಾಲಕಿಯರ ಪಿಯು ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ದೀಪ ಬೆಳಗುವ ಮೂಲಕ ಪ್ರಿಯಾಂಕಾ ಗಾಂಧಿ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಲೀಂ ಅಹಮದ್, ಮಾಜಿ ಸಂಸದೆ ರಮ್ಯಾ, ಪುಷ್ಪ ಅಮರನಾಥ್ ಮತ್ತಿತರರು ಸಾಥ್ ನೀಡಿದರು. ವೇದಿಕೆ ಮೇಲೆ ಪ್ರಿಯಾಂಕಾ ಗಾಂಧಿಗೆ ಸಾವಯವ ಬೆಲ್ಲ, ಶ್ರೀಕೃಷ್ಣ ವಿಗ್ರಹ ಕೊಟ್ಟು ಅಭಿನಂದಿಸಿದರು.
ಬಳಿಕ ಮಾತನಾಡಿದ ಪ್ರಿಯಾಂಕಾ ಗಾಂಧಿಗೆ, ಕನ್ನಡದಲ್ಲೇ ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಶುರು ಮಾಡಿದರು. ನಟಿ, ಮಾಜಿ ಸಂಸದೆ ರಮ್ಯ ನೋಡಿ ಖುಷಿ ಪಟ್ಟ ಪ್ರಿಯಾಂಕಾ, ದಿವ್ಯಾ ಅವರನ್ನು ಬಹಳ ದಿನಗಳ ನಂತರ ನೋಡಿ ಖುಷಿ ಆಗುತ್ತಿದೆ. ನಾನು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗೋದು ತಡವಾಯಿತು. ಹೀಗಾಗಿ ಸಭೆಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ಕರ್ನಾಟಕದ ರೈತರು ತುಂಬಾ ಕಷ್ಟ ಪಡುತ್ತಿದ್ದಾರೆ. ನಮ್ಮ ಶ್ರಮದಿಂದ ಮಾತ್ರ ನಾಡು ಕಟ್ಟಲು ಸಾಧ್ಯ. ಇಡೀ ದೇಶದಲ್ಲಿ ಕರ್ನಾಟಕದ ಪ್ರಸಿದ್ಧಿಗೆ ನಿಮ್ಮ ಶ್ರಮ ಕಾರಣ. ಬಸವಣ್ಣ, ನಾರಾಯಣ ಗುರು ಅವರನ್ನು ಸ್ಮರಿಸಿದ ಪ್ರಿಯಾಂಕಾ ಗಾಂಧಿ, ಅವರ ಸಂಸ್ಕೃತಿ ಪಾಲನೆ ಆಗುತ್ತಿರುವುದಕ್ಕೆ ಕರ್ನಾಟಕ ಪ್ರಸಿದ್ಧಿ ಎಂದರು.
ಕರ್ನಾಟಕದ ಜನ ಬಹಳ ವಿದ್ಯಾವಂತರು, ಶ್ರಮಜೀವಿಗಳು. ಐದು ವರ್ಷದಿಂದ ಇಲ್ಲಿನ ಜನ ಸಂಕಷ್ಟದಲ್ಲಿದ್ದು, ಕಳೆದ 3 ವರ್ಷದಿಂದ ಇರುವ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಎಂಬ ಕಳಂಕ ಇದೆ. ನಮ್ಮ ಜನರನ್ನು ಈ ಸರ್ಕಾರ ಲೂಟಿ ಮಾಡುತ್ತಿದೆ. ಈ ಸರ್ಕಾರ ನ್ಯಾಯದಿಂದ ರಚನೆ ಆಗಲಿಲ್ಲ. ಶಾಸಕರನ್ನು ಖರೀದಿಸಿ ರಚನೆಯಾದ ಸರ್ಕಾರ. ಹೀಗಾಗಿ ಇದು ಲೂಟಿ ಮಾಡುತ್ತಿದ್ದು, ಈ ಇದರ ದುಷ್ಪರಿಣಾಮ ನಿಮ್ಮ ಮೇಲೆ ಬೀರುತ್ತದೆ ಎಂದು ಪ್ರಿಯಾಂಕಾ ಗಾಂಧಿ ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯವರು ಬೆಲೆ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. PSI ನೇಮಕಾತಿ ಹಗರಣ ನಡೆಸಿ ಲೂಟಿ ಮಾಡಿದ್ದಾರೆ. ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರಧಾನಿ ಉತ್ತರ ಕೊಡಲಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆ ಮಾಡಲಿಲ್ಲ. ಬಿಜೆಪಿ ರೈತರಿಗೆ ಕೊಟ್ಟ ಭರವಸೆ ಒಂದೂ ಈಡೇರಿಲ್ಲ. ಕೊಟ್ಟ ಭರವಸೆಗಿಂತ ದರ ಹೆಚ್ಚಳ ದುಬಾರಿಯಾಗಿದೆ.
ಮತ್ತೊಂದೆಡೆ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಯತ್ನ ನಡೆಸುತ್ತಿದೆ. ಮುಂದೆ ಅಧಿಕಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದರೆ ಇದೆಲ್ಲದಕ್ಕೂ ಕಡಿವಾಣ ಹಾಕಿ ಭ್ರಷ್ಟಾಚಾರ ತಡೆದು ರೈತರು, ಸರ್ವ ಜನರ ಹಿತ ಕಾಯಲಿದೆ. ದೊಡ್ಡ ದೊಡ್ಡ ಪ್ರೈವೇಟ್ ಸೆಕ್ಟರ್ ಗಳನ್ನು ಪ್ರಧಾನಿ ತಮ್ಮ ಆಪ್ತರಿಗೆ ಮಾರಿದ್ದಾರೆ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲ್