ಮಂಡ್ಯ: ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಾಳೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ನಾಳೆ ಬೆಳಗ್ಗೆ 7ರಿಂದ ಸಂಜೆ 5ರವರೆಗೂ ಜಿಲ್ಲೆಯ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಲ್ಲಿ 125 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದ್ದು, ಒಂದು ಗ್ರಾಮ ಪಂಚಾಯಯತ್ನಲ್ಲಿ 12 ಸ್ಥಾನಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂರು ತಾಲೂಕಿನ 810 ಕ್ಷೇತ್ರಗಳಲ್ಲಿ 4009 ನಾಮಪತ್ರ ಸಲ್ಲಿಕೆಯಾಗಿದ್ದು, ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹೆಚ್ಚುವರಿ ಮತಗಟ್ಟೆ:
ಮೂರು ತಾಲೂಕುಗಳಲ್ಲಿ 726 ಮತಗಟ್ಟೆಗಳು ಸೇರಿದಂತೆ 195 ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು ಈ 1116 ಮತಗಟ್ಟೆಗಳಲ್ಲಿ ಮೊದಲನೇ ಹಂತದ ಚುನಾವಣೆಯ ಮತದಾನ ನಡೆಯಲಿದೆ. ಮಸ್ಟರಿಂಗ್ ಕೇಂದ್ರದಿಂದ 4977 ಅಧಿಕಾರಿಗಳನ್ನು ಮತಗಟ್ಟೆಗೆ ಕರೆದೊಯ್ಯಲು ಹಾಗೂ ವಾಪಸ್ ಕರೆತರಲು 155 ಕೆಎಸ್ಆರ್‌ಟಿಸಿ ಬಸ್ಸುಗಳನ್ನು ನಿಯೋಜಿಸಲಾಗಿದೆ.
ಮೀಸಲಾತಿ ವಿವರ:
ಮೊದಲ ಹಂತದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಿಂದ 698, ಪರಿಶಿಷ್ಟ ಪಂಗಡದಿಂದ 152, ಹಿಂದುಳಿದ ವರ್ಗ(ಎ) 678, ಹಿಂದುಳಿದ ವರ್ಗ (ಬಿ) 195 ಹಾಗೂ ಸಾಮಾನ್ಯ 2287 ಮಂದಿ ಕಣದಲ್ಲಿದ್ದಾರೆ.
ಮತದಾರರ ವಿವರ:
ಜಿಲ್ಲೆಯಲ್ಲಿ ಒಟ್ಟು 12,42,466 ಮತದಾರರಿದ್ದಾರೆ. ಮೊದಲ ಹಂತದ ಮಂಡ್ಯ ತಾಲೂಕಿನಲ್ಲಿ 1,16,001 ಪುರುಷರು, 1,16,990 ಮಹಿಳೆಯರು ಹಾಗೂ 35 ಇತರೆ ಮತದಾರರಿದ್ದಾರೆ. ಮದ್ದೂರು ತಾಲೂಕಿನಲ್ಲಿ 1,12,762 ಪುರುಷರು, 1,15,699 ಮಹಿಳೆಯರು ಹಾಗೂ 20 ಇತರೆ ಮತದಾರರಿದ್ದಾರೆ.
ಮಳವಳ್ಳಿ ತಾಲೂಕಿನಲ್ಲಿ 1,04,521 ಪುರುಷರು,1,01,815 ಮಹಿಳೆಯರು ಹಾಗೂ 10 ಇತರೆ ಮತದಾರರಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 6,67,853 ಮತದಾರರು ನಾಳೆ ಮತ ಚಲಾಯಿಸಲಿದ್ದಾರೆ.