ಮಂಡ್ಯ: ವೇಶ್ಯಾವಾಟಿಕೆಯ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿದಾಗ ಪೊಲೀಸರೇ ಬೆಚ್ಚಿ ಬೀಳುವಂತಹ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ-ಬ್ರಹ್ಮಪುರ ಪ್ರದೇಶದ ನಡುವೆ ಇರುವ ಜೋಸೆಪ್ ಎಂಬಾತನ ಮನೆ ಮೇಲೆ ಪೊಲೀಸರು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಗಾಗಿ ಮನೆಯಲ್ಲಿಯೇ ಸುರಂಗ ನಿರ್ಮಿಸಿ ಅದಕ್ಕೆ ಗಾಳಿ ಸರಾಗವಾಗಿ ಬರಲು ವೆಂಟಿಲೇಟರ್ ಅಳವಡಿಸಿ ಮಹಿಳೆಯರನ್ನು ಕೂಡಿ ಹಾಕಿದ್ದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.
ಬಾಬು ಎಂಬಾತ ಈ ದಂಧೆ ನಡೆಸುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 5 ಜನ ಪುರುಷರು 3 ಮಂದಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ತಲುಪಿಸಲಾಗಿದೆ. ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ ಮಹಿಳೆಯರು ಪಶ್ಚಿಮ ಬಂಗಾಳ ಮೂಲದವರೆಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.
ವೇಶ್ಯಾವಾಟಿಕೆ ಅಡ್ಡೆಗಳು ಈ ರೀತಿ ಭೂಗತವಾಗಿಯೂ ನಡೆಯುತ್ತಿದ್ದು ಪ್ರಕರಣಗಳನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ತನಿಖೆ ತೀವ್ರಗೊಂಡಿದೆ.