ಮಂಡ್ಯ: ಶೀಘ್ರದಲ್ಲೆ ಮನೆಮನೆಗೆ ಡಿಸಿಸಿ ಬ್ಯಾಂಕ್ ಎಂಬ ನೂತನ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಮದ್ದೂರಿನಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಬೈಲ್ ಬ್ಯಾಂಕಿಂಗ್, ಮನೆ ಮನೆಗೆ ವ್ಯಾನ್ ಮೂಲಕ ಹೆಚ್ಚು ಜನ ಸಂಪರ್ಕ ಇರುವ ಕಡೆ ಮನೆ ಬಾಗಿಲಿಗೆ ಬ್ಯಾಂಕ್ ಹೋಗುವ ಕಾರ್ಯಕ್ರಮ ಮಾಡಲಾಗುವುದು ಎಂದರು.
ನೂತನ ಡಿಸಿಸಿ ಬ್ಯಾಂಕ್ನ ಕಟ್ಟಡಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಮಂಜೂರಾದ ಉತ್ತಮ ಕಟ್ಟಡವನ್ನು ಮಂಡ್ಯದಲ್ಲಿ ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಸುಮಾರು 40 ಬ್ಯಾಂಕ್ಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ನೂತನ ಕಾರ್ಯಕ್ರಮ ತರಲಾಗುತ್ತಿದೆ. ಬಿಜೆಪಿ ಪಕ್ಷದಲ್ಲಿ ನಾನೊಬ್ಬ ಕಾರ್ಯಕರ್ತನಾಗಿ ಅಷ್ಟೇ ಗುರುತಿಸಿಕೊಂಡಿದ್ದೇನೆ. ಕಾರ್ಯಕರ್ತನಾಗಿ ಕೆಲಸ ಮಾಡಬೇಕಾದದ್ದು ಬಹಳಷ್ಟಿದೆ. ನನಗೆ ಯಾವುದೇ ಜವಾಬ್ದಾರಿ ವಹಿಸಿದರೂ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.
ಪಕ್ಷ ನನ್ನನ್ನು ಗುರುತಿಸಿ ಸರ್ಕಾರದ ನಾಮನಿರ್ದೇಶಿತನನ್ನಾಗಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಮುಂದೆ ಯಾವುದೇ ಕೆಲಸ ಮಾಡಲು ಸಿದ್ಧನಿದ್ದೇನೆ. ಸಾಲಮನ್ನಾ ಯೋಜನೆಯ ಹಣವನ್ನು ನಮ್ಮ ಕೋ ಆಪರೇಟಿವ್ ಬ್ಯಾಂಕ್ಗೆ ತುಂಬಿಕೊಟ್ಟರೆ, ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ತಿಳಿಸಿದರು.
ಸುಮಾರು 35 ಕೋಟಿ ರೂ.ಗಳಷ್ಟು ಸರ್ಕಾರ ನಮ್ಮ ಬಾಕಿ ನೀಡಿದರೆ ಇನ್ನಷ್ಟು ಅಭಿವೃದ್ಧಿ ಹೊಂದಬಹುದು. ಗ್ರಾಹಕರನ್ನು ಸೆಳೆಯಲು ಹಲವು ಕಾರ್ಯಕ್ರಮಗಳನ್ನು ಸಹಕಾರ ಬ್ಯಾಂಕ್ ವತಿಯಿಂದ ಮಾಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸಮನಾಗಿ ಪೈಪೋಟಿ ನೀಡಲು ಎಂಡಿಸಿಸಿ ಬ್ಯಾಂಕ್ ಸಿದ್ಧವಿದೆ ಎಂದಿದ್ದಾರೆ.
ಇದನ್ನೂ ಓದಿ: ಸರ್ಕಾರದ ಅನುಮತಿ: ಕನ್ನಂಬಾಡಿ ಅಣೆಕಟ್ಟು ಸುತ್ತಲಿನ ಪ್ರದೇಶದಲ್ಲಿ 'ಟ್ರಯಲ್ ಬ್ಲಾಸ್ಟ್'