ಮಂಡ್ಯ: ಮಾಲೀಕನನ್ನು ಕಟ್ಟಿ ಹಾಕಿ ಹಂದಿಗಳ ಕಳ್ಳತನ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡವಪುರ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗಿರಿ ಶೆಟ್ಟಿ ರವರಿಗೆ ಸೇರಿದ ಸುಮಾರು 30 ಹಂದಿಗಳನ್ನು ಕಳ್ಳರು ಶುಕ್ರವಾರ ಬೆಳಗಿನಜಾವ ಕಳ್ಳತನ ಮಾಡಿದ್ದಾರೆ. ಹಂದಿಗಳನ್ನು ಶೆಡ್ಡಿನಲ್ಲಿ ಕೂಡಿಹಾಕಿ ಪಕ್ಕದ ಮನೆಯಲ್ಲಿ ಮಲಗುತ್ತಿದ್ದ ಮಾಲೀಕ ಗಿರಿ ಶೆಟ್ಟಿಗೆ ಬೆಳಗಿನ ಜಾವದಲ್ಲಿ ಶಬ್ದ ಕೇಳಿ ಬಂದಿದೆ. ನೋಡುವ ಸಲುವಾಗಿ ಹೊರ ಬಂದ ವೇಳೆ ಸುಮಾರು 10 ಮಂದಿ ಖದೀಮರು ಹಂದಿಗಳನ್ನು ಕಳ್ಳತನ ಮಾಡಿ ಕ್ಯಾಂಟರ್ಗೆ ತುಂಬಿಕೊಳ್ಳಲು ಮುಂದಾಗಿದ್ದಾರೆ.
ಇದನ್ನು ತಡೆಯಲು ಮುಂದಾದ ಗಿರಿ ಶೆಟ್ಟಿಯವರನ್ನು ಹಗ್ಗದಿಂದ ಕಟ್ಟಿ, ಕೂಗಿಕೊಳ್ಳದಂತೆ ಬೆದರಿಕೆ ಹಾಕಿ ದರೋಡೆ ನಡೆಸಿದ್ದಾರೆ. ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.