ಮಂಡ್ಯ : ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಕೊರೊನಾ ಸೋಂಕಿನಿಂದ ಕಾಪಾಡುವಂತೆ ಮಳವಳ್ಳಿ ತಾಲೂಕಿನ ಜನರು ಶಕ್ತಿ ದೇವತೆ ದಂಡಿನ ಮಾರಮ್ಮನಿಗೆ ಕೋಳಿ ಬಲಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಸೋಂಕು ನಿಯಂತ್ರಣಕ್ಕೆ ವೈದ್ಯರು ಸೇರಿದಂತೆ ಹಲವರು ಶ್ರಮಿಸುತ್ತಿದ್ದಾರೆ. ಇತ್ತ ಪಟ್ಟಣದ ಹೊರವಲಯದ ಮಾರೇಹಳ್ಳಿ, ಎನ್‌ಇಎಸ್, ಗಂಗಾಮತಸ್ಥರ ಬಡಾವಣೆ ಸೇರಿದಂತೆ ಗ್ರಾಮೀಣ ಭಾಗದ ಜನರು ಕೋಳಿ ಬಲಿ ನೀಡಿ ಸೋಂಕಿನಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದಾರೆ.
ಎನ್‌ಇಎಸ್ ಬಡಾವಣೆ, ಸುಲ್ತಾನ್ ರಸ್ತೆ, ಗಂಗಾಮತಸ್ಥರ ಬೀದಿ, ಉಮ್ಮತೂರಮ್ಮನ ತೋಟ, ತಮ್ಮಡಹಳ್ಳಿ ರಸ್ತೆ, ಅಡೇನಿಂಗಯ್ಯನ ಕೇರಿ, ಮಾರೇಹಳ್ಳಿ, ತಾಲೂಕಿನ ನಾಗೇಗೌಡನದೊಡ್ಡಿ ಗೇಟ್ ಸೇರಿದಂತೆ ಗ್ರಾಮೀಣ ಭಾಗದ ಹಲವೆಡೆ ಮೂರು ದಾರಿಗಳು ಸೇರುವ ಜಾಗದಲ್ಲಿ ಮೂರು ಕಲ್ಲುಗಳನ್ನು ಇಟ್ಟು ಅರಿಶಿನ ಕುಂಕುಮ ಹಚ್ಚಿದರು.
ಬೇವಿನ ಸೊಪ್ಪಿನಿಂದ ಶೃಂಗರಿಸಿ ಹೊಸ ಸೀರೆ ತೊಡಿಸಿ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ದೇವರುಗಳನ್ನು ಪ್ರತಿಷ್ಠಾಪಿಸಿ ಕೊರೊನಾ ಸೋಂಕು ನಿಯಂತ್ರಿಸುವಂತೆ ಮಹಿಳೆಯರು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬೆಳಗಿನ ಜಾವ ದೊಡ್ಡಕೆರೆ ಬಳಿಯ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ದೇವರಿಗೆ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದ ಮುಕ್ತಿ ನೀಡುವಂತೆ ದೇವರ ಮೊರೆ ಹೋದರು.
ಮಳವಳ್ಳಿ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಯಾವುದೇ ರೋಗ-ರುಜಿನ, ಸಾವುನೋವು ಸಂಭವಿಸಿದ ವೇಳೆ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ಮೊರೆ ಹೋಗುವುದು ಸಾಮಾನ್ಯ. ಕೋಳಿ ಬಲಿ ನೀಡಿ ಪೂಜೆ ಸಲ್ಲಿಸಿದ್ದರೆ ಜನರನ್ನು ದಂಡಿನ ಮಾರಮ್ಮ ಕಾಪಾಡುವ ನಂಬಿಕೆ ಪುರಾತನ ಕಾಲದಿಂದಲೂ ಇವರಲ್ಲಿದೆ.