ಮಂಡ್ಯ: ಕೆಆರ್ಎಸ್ ಡ್ಯಾಂ ಸಮೀಪದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಲಾಗಿತ್ತು. ಆದ್ರೂ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ಪದೇ ಪದೇ ಸ್ಫೋಟಕಗಳು ಪತ್ತೆಯಾಗುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಇದೀಗ ಎಚ್ಚೆತ್ತುಕೊಂಡಿರುವ ಮಂಡ್ಯ ಜಿಲ್ಲಾಡಳಿತ ಕೂಂಬಿಂಗ್ ಕಾರ್ಯ ಕೈಗೊಂಡಿದೆ. ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಫೋಟಕಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರುಳಿ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಲಾಗಿತ್ತು. ಆದ್ರೂ ಕ್ವಾರಿಗಳ ಬಳಿ ಸ್ಫೋಟಕಗಳು ಪತ್ತೆಯಾಗುತ್ತಿದ್ದು ಜನರನ್ನು ಚಿಂತೆಗೀಡು ಮಾಡಿತ್ತು.
ಕುರಿಗಾಯಿಗಳಿಗೆ ದೊರೆತ ಸ್ಫೋಟಕಗಳು:
ಗಣಿಗಾರಿಕೆ ನಿಷೇಧಿಸಿದ್ದ ಬೇಬಿ ಬೆಟ್ಟದಲ್ಲಿ ಜುಲೈ 16 ಹಾಗೂ ಆಗಸ್ಟ್ 3 ರಂದು ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿಗಳ ಕಣ್ಣಿಗೆ ಅಪಾಯಕಾರಿ ಸ್ಫೋಟಕಗಳು ಪತ್ತೆಯಾಗಿದ್ದವು. ಇದ್ರಿಂದಾಗಿ ನಿಷೇಧದ ನಡುವೆಯೂ ಗಣಿಗಾರಿಕೆ ನಡೆಯುತ್ತಿದೆಯಾ ಎಂಬ ಅನುಮಾನ ಒಂದು ಕಡೆಯಾಗಿದ್ರೆ, ಮತ್ತೊಂದು ಕಡೆ ಗಣಿ ಮಾಲೀಕರು ಸ್ಫೋಟಕಗಳನ್ನು ಶೇಖರಿಸಿಟ್ಟಿರುವ ಮಾತುಗಳು ಕೇಳಿಬಂದಿತ್ತು. ಇದ್ರಿಂದ ಪ್ರಾಣ ಹಾನಿಯಂತಹ ದುರ್ಘಟನೆಗಳು ಸಂಭವಿಸುವ ಭೀತಿ ಜನತೆಗೆ ಎದುರಾಗಿತ್ತು. ಇದೀಗ ಸ್ಫೋಟಕಗಳ ಪತ್ತೆಗಾಗಿ ಬೆಂಗಳೂರಿನ ಬಿಡಿಡಿಎಸ್ ತಂಡ, ಮೈಸೂರು, ಹಾಸನ ಹಾಗೂ ಮಂಡ್ಯದ ಬಾಂಬ್ ಹಾಗೂ ಶ್ವಾನ ದಳ ಮೂಲಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ:
ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದು, ಸ್ಥಳೀಯ ಗಣಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಿನಕುರುಳಿ ಸರ್ವೇ ನಂ. 8, ಮಾಡ್ರಹಳ್ಳಿ ಸರ್ವೇ ಹಾಗೂ ಹೊನಗಾನದಲ್ಲಿ ಸರ್ವೇ ನಂ. 127, 153ರಲ್ಲಿ ಜಿಲೆಟಿನ್ ಹಾಗೂ ಡಿಟೋನೇಟರ್ ಪತ್ತೆಯಾಗಿವೆ.
ಇದನ್ನೂ ಓದಿ: ಏಕಾಏಕಿ ಕೇಳಿ ಬಂದ ಭಾರಿ ಶಬ್ದ: ಬೆಚ್ಚಿ ಬಿದ್ದ ಮಂಡ್ಯ ಜನತೆ
ಸುಮಾರು 2 ಸಾವಿರ ಎಕರೆ ವಿಸ್ತೀರ್ಣದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಮುಂದುವರೆಯಲಿದೆ. ಜಿಲ್ಲಾಡಳಿತದ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.