ಮಂಡ್ಯ: ಕಾವೇರಿ ಹೋರಾಟಕ್ಕೆ ಶತಮಾನಗಳ ಇತಿಹಾಸವಿದೆ. ಆದರೆ, ಕಾವೇರಿ ಅಂತಿಮ ತೀರ್ಪಿನ ನಂತರ ಹೋರಾಟದ ಹಾದಿಯೇ ಬದಲಾಗಿದೆ. ಹೋರಾಟ ಅಂದರೆ ಅದು ಕಾವೇರಿಯದ್ದು ಅನ್ನುವ ಮಾತು ಒಂದು ಕಾಲದಲ್ಲಿ ಇತ್ತು. ಆದರೆ ಕಳೆದ ಒಂದೂವರೆ ದಶಕಗಳಿಂದ ಹೋರಾಟ ಕಳೆ ಕಳೆದುಕೊಂಡಿತ್ತು. ನಾಯಕತ್ವದ ಬದಲಾವಣೆಯ ಕೂಗೂ ಕೇಳಿ ಬಂದಿತ್ತು. ಈಗ ಮತ್ತೆ ನಾಯಕತ್ವದ ಪ್ರಶ್ನೆ ರೈತರಲ್ಲಿ ಎದ್ದಿದೆ.
ಹೌದು, ಕಾವೇರಿ ಹೋರಾಟ ಕೇವಲ ತಮಿಳುನಾಡಿಗೆ ನೀರು ಬಿಡಬೇಕು ಎಂಬ ತೀರ್ಮಾನ ಬಂದಾಗ ಮಾತ್ರ ನಡೆಯುತ್ತಿತ್ತು. ಆದರೆ ಅಂತಿಮ ತೀರ್ಪು ಬಂದ ನಂತರ ಕಾವೇರಿಯ ಸಂಪೂರ್ಣ ಹಿಡಿತ ಉಸ್ತುವಾರಿ ಮಂಡಳಿಗೆ ಸೇರಿದೆ. ಹೀಗಾಗಿ ತಮಿಳುನಾಡಿಗೆ ಇರಲಿ, ನಾವೇ ನೀರನ್ನು ಪಡೆಯಬೇಕಾದರೆ ಮಂಡಳಿಯ ಅನುಮತಿ ಪಡೆಯಲೇಬೇಕು. ಹೀಗಾಗಿ ನೀರಿಗಾಗಿ ಹೊಸ ಹೋರಾಟ ಶುರುವಾಗಿದೆ.
ಕಾವೇರಿಗಾಗಿಯೇ ಜಿಲ್ಲೆಯಲ್ಲಿ ಕಾವೇರಿ ಹಿತರಕ್ಷಣಾ ಸಮಿತಿಯನ್ನು ಮಾಜಿ ಸಂಸದ ಜಿ.ಮಾದೇಗೌಡರ ನೇತೃತ್ವದಲ್ಲಿ ಕಟ್ಟಲಾಗಿತ್ತು. ಈ ಸಮಿತಿ ಹೋರಾಟದ ಮೂಲಕ ನೀರಿನ ಹಕ್ಕನ್ನೂ ಪಡೆದುಕೊಂಡಿದೆ. ಹೋರಾಟದ ಮೂಲಕ ರಾಜ್ಯ ಸರ್ಕಾರಕ್ಕೂ ಎಚ್ಚರಿಕೆ ನೀಡಿ ರೈತರ ಹಿತ ಕಾಯುತ್ತಿತ್ತು. ಆದರೆ ಅಂತಿಮ ತೀರ್ಪು ಹಾಗೂ ಮಂಡಳಿ ರಚನೆ ನಂತರ ತನ್ನ ಶಕ್ತಿ ಕಳೆದುಕೊಂಡಿದೆ ಎಂಬ ಮಾತುಗಳು ಹೋರಾಟಗಾರರ ವಲಯದಲ್ಲಿ ಕೇಳಿ ಬಂದಿತ್ತು. ಮುಂದಿನ ನಾಯಕತ್ವ ಹಾಗೂ ಸಮಿತಿಗೆ ಯಾರು ನೇತೃತ್ವ ವಹಿಸುತ್ತಾರೆ ಎಂಬ ಪ್ರಶ್ನೆ ಈಗ ಎದ್ದಿದೆ.
ಈಗ ಮತ್ತೆ ಬೆಳೆ ರಕ್ಷಣೆಗೆ ಹೋರಾಟ ಶುರುವಾಗಿದೆ. ಹಿತರಕ್ಷಣಾ ಮಂಡಳಿ ಹೋರಾಟದಿಂದ ದೂರ ಸರಿದಿದೆ. ಆದರೆ ಕಾವೇರಿ ನೀರಿನ ಹಕ್ಕು ಕೇಳಬೇಕಾದರೆ ಕಾವೇರಿ ನೀರು ನಿರ್ವಹಣಾ ಮಂಡಳಿ ಬಾಗಿಲು ಬಡಿಯಬೇಕು. ಹೀಗಾಗಿ ರಾಜಕೀಯ ಇಚ್ಛಾಶಕ್ತಿ ಹಾಗೂ ಸಮರ್ಥ ವಾದ ಮಂಡನೆಯ ಜೊತೆಗೆ ಹೋರಾಟವೂ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರೈತ ಸಂಘದ ಮುಖಂಡರೇ ಇದಕ್ಕೆ ಸೂಕ್ತ ಎಂಬ ಮಾತುಗಳು ಕೇಳಿ ಬಂದಿವೆ.
ಈಗಾಗಲೇ ಬೆಳೆ ರಕ್ಷಣೆಗಾಗಿ ರೈತ ಸಂಘದ ಸದಸ್ಯರು ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹೋರಾಟ ಶುರು ಮಾಡಿದ್ದಾರೆ. ಹೋರಾಟ ಆಹೋರಾತ್ರಿಯದ್ದಾಗಿದೆ. ಐಟಿ ಉದ್ಯಮಿಯಾಗಿರುವ ದರ್ಶನ್, ಕಂಪನಿ ಬಿಟ್ಟು ಆಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ಸಮರ್ಥವಾಗಿ ಅಂಕಿ-ಅಂಶ ತಿಳಿದು, ರೈತಪರ ಹೋರಾಟ ಮಾಡುತ್ತಿದ್ದು, ನಾಯಕತ್ವ ಕಿರಿಯ ಹೋರಾಟಗಾರನ ಹೆಗಲಿಗೆ ಏರಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.