ಮಂಡ್ಯ: ಎರಡು ವರ್ಷದ ಹುಡುಕಾಟದ ಬಳಿಕ ಮನೆ ನಿರ್ಮಾಣಕ್ಕೆ ಉತ್ತಮ ಜಾಗ ಸಿಕ್ಕಿದೆ. ಹೀಗಾಗಿ ಮಂಡ್ಯ ಹಾಗೂ ಮದ್ದೂರಿಗೆ ಹತ್ತಿರವಾಗುವ ಕಾರಣ ಹನಕೆರೆಯಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣಕ್ಕಾಗಿ ಇಂದು ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಿರುವ ಹಿನ್ನೆಲೆಯಲ್ಲಿ ಜನ ಬರುವುದಕ್ಕೂ ಸಹಾಯ ಆಗುತ್ತೆ ಎಂದು ಹೇಳಿದರು.
ಮಗನಿಗೆ ರಾಜಕೀಯ ನೆಲೆ ಕಲ್ಪಿಸಲು ಮನೆ ನಿರ್ಮಾಣ?:
ಮಗ ಅಭಿಗೆ ರಾಜಕೀಯ ನೆಲೆ ಕಲ್ಪಿಸಲು ಹನಕೆರೆಯಲ್ಲಿ ಮನೆ ನಿರ್ಮಾಣವೇ ಎಂಬ ವಿಚಾರವಾಗಿ ಮಾತನಾಡುತ್ತಾ, 'ಯಾರ್ಯಾರ ಮನಸ್ಸಿನಲ್ಲಿ ಏನೇನಿದೆಯೋ, ಅವರ ಊಹೆಗಳಿಗೆ ನಾನು ಪ್ರತಿಕ್ರಿಯಿಸಲ್ಲ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇನೆ. ಮಂಡ್ಯದಲ್ಲೇ ಸ್ವಂತ ಮನೆ ಮಾಡುವ ಮಾತು ಕೊಟ್ಟಿದ್ದೆ, ಅದರಂತೆ ಮನೆ ಕಟ್ಟುತ್ತಿದ್ದೇನೆ' ಎಂದು ಜೆಡಿಎಸ್ ನಾಯಕರುಗಳಿಗೆ ತಿರುಗೇಟು ನೀಡಿದರು.
'ಮಂಡ್ಯದ ಮಣ್ಣಲ್ಲಿ ವಾಸ ಮಾಡಬೇಕೆಂಬುದು ನನ್ನ ಹಾಗು ಅಭಿ ಆಸೆಯಾಗಿತ್ತು'
ಮಂಡ್ಯದ ಮಣ್ಣಿನ ತಿಲಕ ಹಚ್ಚಿ ಅಂಬರೀಶ್ ಅವರನ್ನು ಕಳುಹಿಸಿಕೊಟ್ಟಿದ್ದೇವೆ. ಅಷ್ಟೇ ಅಲ್ಲದೇ, ಇಲ್ಲೇ ವಾಸ ಮಾಡಬೇಕು ಎಂಬುದು ನನ್ನ ಹಾಗೂ ಅಭಿಯ ಆಸೆಯೂ ಹೌದು. ಹಾಗಾಗಿ, ಇವತ್ತು ಮನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ ಎಂದರು.
'ದೇವರು ಬರೆದಂತೆ ಭವಿಷ್ಯ ಇರುತ್ತೆ'
ಜನರು ಬಯಸಿದ್ರೆ ಅಭಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, 'ಅಭಿಯನ್ನೇ ಕೇಳಿ' ಎಂದರಲ್ಲದೇ, 'ನನ್ನ ಒಪ್ಪಿಗೆ ಇದೆಯೋ ಇಲ್ವೋ.? ಸಂದರ್ಭ, ಸಮಯ ಯಾವ ರೀತಿ ಇರುತ್ತೋ ನೋಡೋಣ. ಯಾವುದೂ ನಮ್ಮ ಕೈಯಲ್ಲಿ ಇರೋದಿಲ್ಲ. ನಾನು ರಾಜಕೀಯಕ್ಕೆ ಬರ್ತೀನಿ, ಎಂಪಿ ಆಗ್ತೀನಿ ಅಂತ ಕನಸಲ್ಲೂ ನೆನೆಸಿರಲಿಲ್ಲ. ಆದ್ರೆ ದೇವರು ಬರೆದಂತೆ ಭವಿಷ್ಯ ಇರುತ್ತೆ. ನಮ್ಮ ಪ್ಲಾನಿಂಗ್ ಪ್ರಕಾರ ನಡೆಯಲ್ಲ' ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದರು.
'10 ತಿಂಗಳಲ್ಲಿ ಮನೆ ನಿರ್ಮಾಣ':
9-10 ತಿಂಗಳಲ್ಲಿ ಮನೆ ನಿರ್ಮಾಣವಾಗಬಹುದು. ಜನರಿಗೆ ಉಪಯೋಗವಾಗುವಂತೆ ಸರಳವಾಗಿ ಮನೆ ನಿರ್ಮಾಣ ಮಾಡುತ್ತೇವೆ ಎಂದು ಸುಮಲತಾ ಹೇಳಿದರು.
'ಮನೆ-ಮನದಲ್ಲಿ ಪೂಜಿಸಿದ್ರೂ ಗಣೇಶ ಸಂತೋಷಪಡುತ್ತಾನೆ'
ಗಣೇಶ ಹಬ್ಬಕ್ಕೆ ಅನುಮತಿ ನೀಡಬೇಕೆ? ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹಬ್ಬದ ಸಂದರ್ಭದಲ್ಲಿ ಕೇರಳ ನಿಯಮಗಳನ್ನು ಸಡಿಲಿಕೆ ಮಾಡಿದ್ದಕ್ಕೆ ಪ್ರತಿದಿನ 30 ಸಾವಿರ ಕೋವಿಡ್ ಕೇಸ್‌ಗಳು ಬರುತ್ತಿವೆ. ನಾವು ಕೊರೊನಾ ತಡೆಯಲು ಯಾವ ರೀತಿ ನಿರ್ಬಂಧ ವಿಧಿಸಬೇಕು ಅನ್ನೋದನ್ನು ನೋಡಬೇಕು. ಜಾತ್ರೆಯ ರೀತಿ ಮಾಡಿದ್ರೆ ಮಾತ್ರ ಗಣೇಶ ಹಬ್ಬ ಅಲ್ಲ. ನಮ್ಮ ಮನೆ-ಮನಗಳಲ್ಲಿ ಪೂಜಿಸಿದ್ರೂ ಗಣೇಶ ಸಂತೋಷಪಡುತ್ತಾನೆ. ಹೀಗಾಗಿ ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆಯಬೇಕು ಎಂದು ಸಲಹೆ ಕೊಟ್ಟರು.
ಕಾವೇರಿ ಪ್ರಾಧಿಕಾರದ ಸೂಚನೆಯಂತೆ, ತಮಿಳುನಾಡಿಗೆ ನೀರು ಹಂಚಿಕೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ರೈತರಿಗೆ ಅನ್ಯಾಯವಾಗುವ ವಿಚಾರಕ್ಕೆ ನನ್ನ ವಿರೋಧವಿದೆ ಎಂದರು.
ಇದನ್ನೂ ಓದಿ: ಸುಮಲತಾ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್ವುಡ್ ತಾರಾ ಬಳಗ... ಯಾರೆಲ್ಲ ಭಾಗಿಯಾಗಿದ್ರೂ ನೋಡಿ!