ಮಂಡ್ಯ : ಮಂಡ್ಯದಲ್ಲಿ ಕೆಆರ್‌ಎಸ್ ಕದನ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನಡುವಿನ ವಾಕ್ಸಮರ ಸದ್ಯ ತಣ್ಣಗಾಗುವಂತೆ ಕಾಣುತ್ತಿಲ್ಲ. ಈ ನಡುವೆ ಸಂಸದೆ ಸುಮಲತಾ ಜಿಲ್ಲೆಯ ಅಕ್ರಮ ಗಣಿ, ಕಲ್ಲುಕ್ವಾರಿಗಳಿಗೆ ನಾಳೆ ಭೇಟಿ ನೀಡಲಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕುಗಳಲ್ಲಿನ ಹಲವು ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಶ್ರೀರಂಗಪಟ್ಟಣದ ಚೆನ್ನನಕೆರೆ, 3.30ಕ್ಕೆ ಹಂಗರಹಳ್ಳಿಗೆ ಭೇಟಿ ನೀಡಿ, ಸಂಜೆ 4.30ಕ್ಕೆ ಪಾಂಡವಪುರದ ಬೇಬಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.
ಇತ್ತ ಸುಮಲತಾ ನಾಳೆ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡುವ ವಿಚಾರ ತಿಳಿಯುತ್ತಿದ್ದಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, 3 ದಿನಗಳಿಂದ ಕಟ್ಟೆ ಬಗ್ಗೆ ಭಾಷಣ ಬಿಗಿದು ಈಗ ಯಾಕೆ ಗಣಿ ಸ್ಥಳಗಳಿಗೆ ಹೋಗ್ತಿದ್ದೀರಾ? ನಿಮ್ಮ ಉದ್ದೇಶ ಏನು..? ಗಣಿಗಾರಿಕೆ ನಂಬಿ ಬದುಕುವವರಿಗೆ ತೊಂದರೆ ಕೊಡುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ನಿಮಗೆ ಅಣೆಕಟ್ಟಿನ ಬಗ್ಗೆ ಆಸಕ್ತಿ ಇದ್ದಿದ್ದರೇ ಮೊದಲು ಅಲ್ಲಿಗೆ ಭೇಟಿ ಕೊಡ್ತಿದ್ರಿ. ನಿಮಗೆ ಕಟ್ಟೆ ಬಗ್ಗೆ ಕಾಳಜಿ ಇಲ್ಲ. ಮಂಡ್ಯದಲ್ಲಿ ಅದಿರು, ಚಿನ್ನ ತೆಗೆಯುತ್ತಿಲ್ಲ. ಜಲ್ಲಿಕಲ್ಲು ತೆಗೆಯೋದು. ಯಾರಾದರೂ ಅಕ್ರಮ ಮಾಡುತ್ತಿದ್ದರೆ ಸಕ್ರಮ ಮಾಡಿಕೊಡಿ. ಸುಮ್ಮನೆ ನ್ಯೂಸೆನ್ಸ್ ಕ್ರಿಯೇಟ್ ಮಾಡಬೇಡಿ ಎಂದು ದೂರಿದರು.
KRS ಬಿರುಕು ಹೇಳಿಕೆಗೆ ಅಧಿಕಾರಿಗಳು ನಿಮಗೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಆದರೂ ಜನಕ್ಕೆ ಯಾಕೆ ಹೀಗೆ ಗೊಂದಲ ಮಾಡ್ತಿದ್ದೀರಾ.? KRS ಬಗ್ಗೆ ಮಾತನಾಡಿ ಈಗ ಅಕ್ರಮ ಗಣಿ ಪ್ರದೇಶಕ್ಕೆ ಹೋಗ್ತಿದ್ದೀರಾ. ನಿಮಗೆ ಬೇಕಾಗಿರುವುದು ಗಣಿಗಾರಿಕೆ. ಯಾಕಿಷ್ಟು ಗಣಿ ಮೇಲೆ ಆಸಕ್ತಿ. ಇದರಿಂದ ನಿಮಗೆ ಏನು ಬೇಕು ಎಂದು ಗುಡುಗಿದರು.
ಓದಿ: ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿಲ್ಲ: ಕಾವೇರಿ ನೀರಾವರಿ ಅಧೀಕ್ಷಕ ಅಭಿಯಂತರ ಸ್ಪಷ್ಟನೆ