ಮಂಡ್ಯ: ದೇಶದ ಎಲ್ಲೆಡೆ ಹರಡಿರುವ ಮಹಾಮಾರಿ ಕೊರೊನಾ ಓಡಿಸುವ ಕಠಿಣ ಸಂದರ್ಭದಲ್ಲಿ ಯೋಗ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ.ನಾರಾಯಣಗೌಡ ಹೇಳಿದರು.
ಜಿಲ್ಲಾ ಪಂಚಾಯ್ತಿಯ ಮಿನಿ ಸಭಾಂಗಣದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಉಚಿತ ಆನ್‌ಲೈನ್ ಯೋಗ ತರಗತಿಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಜೂಮ್ ವಿಡಿಯೋ ಸಂವಾದದ ಮೂಲಕ ಉದ್ಘಾಟನೆ ನೆರವೇರಿಸಿದರು.
ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ನಮ್ಮ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉಚಿತ ಯೋಗ ತರಗತಿ ಕಾರ್ಯಕ್ರಮವನ್ನು ಆರಂಭಿಸುತ್ತಿರುವುದು ಖುಷಿ ತಂದಿದೆ. ಯೋಗದ ಮುಖಾಂತರ ಈ ಕೊರೊನಾವನ್ನು ಓಡಿಸಬಹುದು. ನಮ್ಮ ಕುಟುಂಬದ ಹಿರಿಯ-ಕಿರಿಯರೆಲ್ಲರಲ್ಲಿ ಆರೋಗ್ಯ ವೃದ್ಧಿಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಪಾರಂಪರಿಕ ಇತಿಹಾಸವನ್ನು ಹೊಂದಿರುವ ಯೋಗವನ್ನು ನಾವೆಲ್ಲರೂ ಮರೆತಿದ್ದೇವೆ. ಆದರೆ ಪ್ರಸ್ತುತದ ಕಠಿಣ ಸಂದರ್ಭದಲ್ಲಿ ಹಿಂದಿನ ಕಾಲದಂತೆಯೇ ಬೆಳಗ್ಗೆ ಹಾಗೂ ಸಂಜೆ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಹೊರಗೆ ತಿರುಗಾಡುವ ಬದಲು ಮನೆಯಲ್ಲಿ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. ಈ ಉಚಿತ ಯೋಗ ತರಗತಿಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.