ಮಂಡ್ಯ : ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಅಖಾಡ ರಂಗೇರಿದ್ದು, ಎಲ್ಲೆಡೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಪರ ಜಿಲ್ಲೆಯ ಏಳು ತಾಲೂಕಿನಲ್ಲೂ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಅಪ್ಪಾಜಿಗೌಡರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಇಂದು ಮದ್ದೂರು ಪಟ್ಟಣದಲ್ಲಿ ಪಂಚಾಯ್ತಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ನಿಖಿಲ್, ಅಪ್ಪಾಜಿಗೌಡ ಪರಿಷತ್ ಸದಸ್ಯರಾಗಿ ಒಳ್ಳೆಯ ಕೆಲಸ ಮಾಡಿದ್ದು, ಮತ್ತೊಮ್ಮೆ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಮದ್ದೂರು ಜೊತೆಗೆ ಕೆ.ಎಂ.ದೊಡ್ಡಿ ಸೇರಿದಂತೆ ಜಿಲ್ಲೆಯ ಹಲವೆಡೆ ಅಬ್ಬರದ ಕ್ಯಾಂಪೇನ್ ನಡೆಸುತ್ತಿರುವ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರದ ಶಾಸಕರುಗಳು, ಮುಖಂಡರುಗಳು ಸಾಥ್ ನೀಡುತ್ತಿದ್ದಾರೆ.
ಅಪ್ಪಾಜಿಗೌಡ ನಮ್ಮ ಹಿರಿಯಣ್ಣನಂತೆ ಅವರ ಮೇಲೆ ಪಕ್ಷ ವಿಶ್ವಾಸವಿಟ್ಟು ಟಿಕೆಟ್ ನೀಡಿದೆ. ಅಪ್ಪಾಜಿಗೌಡರು ಸಹ ಆ ವಿಶ್ವಾಸವನ್ನು ಚಾಚು ತಪ್ಪದೇ ಉಳಿಸಿಕೊಂಡು ಹೋಗುತ್ತಿದ್ದು, ಅವರನ್ನು ಗೆಲ್ಲಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆಗೆ ಪರಿಷತ್ ಚುನಾವಣೆಯನ್ನು ದಿಕ್ಸೂಚಿ ಮಾಡಿ ಎಂದರು. ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ದಳಪತಿಗಳ ಅಬ್ಬರ ಜೋರಾಗಿದ್ದು, ಪರಿಷತ್ ಮತದಾರರು ಸಹ ಜೆಡಿಎಸ್ ಪ್ರಚಾರಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ.