ಮಂಡ್ಯ: ಕೋವಿಡ್ -19 ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೇಂದ್ರ ಸ್ಥಾನದಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿ ಸಲಹೆ ಸೂಚನೆ ನೀಡಿದರು.
ಜಿಲ್ಲೆಯಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆ ಇದೆ. ಆದಾಗ್ಯೂ ಈ ವಿಚಾರವಾಗಿ ಜಿಲ್ಲೆಯ ಜನ ಭಯಬೀಳುವ ಅಗತ್ಯ ಇಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರೋದು ನಿಜ. ಆದ್ರೆ ಸೋಂಕಿತರೆಲ್ಲ ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿರುವವರು. ಅವರಿಂದ ಜಿಲ್ಲೆಯ ಜನರಿಗೆ ಹರಡಲು ಅವಕಾಶವಿಲ್ಲ ಎಂದು ಜಿಲ್ಲೆಯ ಜನರಿಗೆ ಬೆಂಗಳೂರಿನಲ್ಲೇ ಕುಳಿತು ಸಮಾಧಾನ ಮಾಡಿದ್ದಾರೆ.
ಹೊರ ರಾಜ್ಯಗಳಿಂದ ಜಿಲ್ಲೆಗೆ ಬರಲು 2 ಸಾವಿರಕ್ಕೂ ಹೆಚ್ಚು ಜನ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಈಗಾಗಲೇ ಸುಮಾರು 1,400 ಜನ ಜಿಲ್ಲೆಗೆ ಬಂದಿದ್ದಾರೆ. ಬಂದವರನ್ನೆಲ್ಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಆಗಿರುವವರಲ್ಲೇ ಸೊಂಕಿತರು ಇದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ಅವರಿಂದ ಸ್ಥಳೀಯರಿಗೆ ಹರಡುವ ಸಾಧ್ಯತೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.
ಸಭೆಯಲ್ಲಿ ಕೋವಿಡ್ - 19 ವಿಚಾರವಾಗಿ ಜಿಲ್ಲೆಯ ಅಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಮಾಹಿತಿ ಪಡೆದುಕೊಂಡರು. ಕ್ವಾರಂಟೈನ್ ಆಗಿರುವವರನ್ನು ಚನ್ನಾಗಿ ನೋಡಿಕೊಳ್ಳಬೇಕು. ಗುಣಮಟ್ಟದ ಊಟ ತಿಂಡಿ ನೀಡಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲೆಗೆ ಬಂದು ಕ್ವಾರಂಟೈನ್ ಅವಧಿ ಮುಗಿಸಿದವರಿಗೆ ಮತ್ತೊಮ್ಮೆ ಟೆಸ್ಟ್ ಮಾಡಿ, ನೆಗೆಟಿವ್ ಬಂದವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಗೆ ಆಗಮಿಸಲು ಇರುವ ಎಲ್ಲ ಮಾರ್ಗಗಳನ್ನ ಬಂದ್ ಮಾಡಲಾಗಿದೆ. ಪ್ರತಿ ಮಾರ್ಗದಲ್ಲೂ ಚೆಕ್ ಪೋಸ್ಟ್ ಇದೆ. ಈ ಹಿಂದೆ ನೀಡಿದ್ದ ಪಾಸ್ ಅಥವಾ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಬಂದವರನ್ನ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಗೆ ತಮಿಳುನಾಡು, ಆಂಧ್ರ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತಿನಿಂದ ಬಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ನಿತ್ಯ ಹೆಚ್ಚು ಪರೀಕ್ಷೆ ನಡೆಸಬೇಕು. ಪರೀಕ್ಷಾ ಸಾಧನ ಕೊರತೆ ಇದ್ದರೆ ತಕ್ಷಣ ತಿಳಿಸಬೇಕು. ಕ್ವಾರಂಟೈನ್ಗೆ ಸ್ಥಳಾವಕಾಶದ ಕೊರತೆ ಇದ್ದರೆ, ಅನುದಾನದ ಅಗತ್ಯ ಇದ್ದರೆ ತಿಳಿಸಬೇಕು. ಆರೋಗ್ಯ ಸೇತು ಆ್ಯಪ್ ಸಾರ್ವಜನಿಕರು ಅಳವಡಿಸಿಕೊಳ್ಳಲು ಮಾಹಿತಿ ನೀಡಬೇಕು ಎಂದು ವಿಡಿಯೊ ಕಾನ್ಫರೆನ್ಸ್ನಲ್ಲಿ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೆ ಕ್ವಾರಂಟೈನ್ನಲ್ಲಿ ಇರುವವರ ಪೈಕಿ 500 ಕ್ಕೂ ಹೆಚ್ಚು ಜನರ ಟೆಸ್ಟ್ ರಿಪೋರ್ಟ್ ಬರಬೇಕಿದೆ. ಇವರಲ್ಲಿ ಪಾಸಿಟಿವ್ ಬಂದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಯಿತು ಎಂಬ ಕಾರಣಕ್ಕೆ ಜನ ಭಯಭೀತರಾಗೋದು ಬೇಡ. ಅವರೆಲ್ಲರೂ ಜಿಲ್ಲಾಡಳಿತ ಸೂಚಿಸಿದಂತೆ ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್ ಆಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಜಿಲ್ಲೆ ವಿಚಾರವಾಗಿ ಬುಧವಾರ ಸಚಿವರು, ಜಿಲ್ಲೆಯ ಶಾಸಕರು, ಸಂಸದರ ಜೊತೆ ಸಭೆ ನಡೆಸಲಿದ್ದಾರೆ. ಮುನ್ನೆಚರಿಕೆ ಕ್ರಮವಾಗಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.