ಮಂಡ್ಯ: "ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮಂಡ್ಯ ಎಂದರೆ ರೈತರು, ಕಬ್ಬು, ಭತ್ತ ಎಂದು ಕರೆಸಿಕೊಳ್ಳುವ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಬ್ಬರೂ ಕೃಷಿ ಸಚಿವರಾಗಿರಲಿಲ್ಲ. ಈ ಜಿಲ್ಲೆಯ ಜನರ ಆಶೀರ್ವಾದ, ಸ್ವಾಮೀಜಿಯವರ ಕೃಪೆ, ನಮ್ಮ ಪಕ್ಷದ ನಾಯಕರು ಶಾಸಕರ ಸಹಕಾರದಿಂದ ನಾನು ಕೃಷಿ ಸಚಿವನಾಗಲು ಅವಕಾಶ ಸಿಕ್ತು" ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಮಂಡ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಮಂಡ್ಯದ ಡಾ.ರಾಜ್ ಕುಮಾರ್ ಬಡಾವಣೆ ಮೈದಾನದಲ್ಲಿಂದು ಏರ್ಪಡಿಸಿದ್ದ ಸಿರಿಧಾನ್ಯ ಮೇಳ, ಬೆಲ್ಲದ ಪರಿಷೆಯಲ್ಲಿ ಅವರು ಮಾತನಾಡಿದರು.
"ಕಾವೇರಿ ನದಿ ನೀರಿನ ಹಂಚಿಕೆ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆಗೆ ಸಂಕಷ್ಟ ಸೂತ್ರ ಬೇಕು. ರಾಜ್ಯದ ರೈತರನ್ನು ಉಳಿಸುವುದು ನಮ್ಮ ಜವಾಬ್ದಾರಿ ಅದನ್ನು ನಿರ್ವಹಿಸುತ್ತೇವೆ. ಕಡಿಮೆ ನೀರಿನ ಬಳಕೆ ಮೂಲಕ ಕೃಷಿ ಮಾಡುವುದು, ಅಂತರ್ಜಲ ಹೆಚ್ಚಿಸುವ ಪ್ರಯತ್ನಗಳನ್ನೂ ನಾವು ಮಾಡಬೇಕಿದೆ. ಕೃಷಿ ಹೊಂಡ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದೆ. ರೈತರ ಬದುಕು ಹಸನಾಗಬೇಕೆಂಬುದು ನಮ್ಮ ಆಶಯ ಅದಕ್ಕೆ ಪೂರಕವಾದ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ" ಎಂದು ಹೇಳಿದರು.
ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, "ಸಿರಿಧಾನ್ಯ ಮೇಳದ ಹಲವಾರು ಮಳಿಗೆಗಳನ್ನು ಉದ್ಘಾಟನೆ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ದೇಶ ಉಸಿರಾಡುತ್ತಿರುವುದು ಎಲ್ಲಿ ಎಂದರೆ ಅದು ಹಳ್ಳಿಗಳಲ್ಲಿ, ದೇಶದ ಬೆನ್ನೆಲುಬು ರೈತರು. ಎಲ್ಲಿ ರೈತ ಚೆನ್ನಾಗಿರುತ್ತಾನೆ, ರೈತನ ಉತ್ಪನ್ನಗಳು ದೇಶಕ್ಕೆ ಕೊಡುಗೆಯಾಗಿ ಬರುತ್ತಿರುತ್ತವೆಯೂ ಅಂತಹ ದೇಶ ನಕ್ಕು ನಲಿಯುತ್ತಿರುತ್ತದೆ" ಎಂದು ರೈತರ ಮಹತ್ವವನ್ನು ತಿಳಿಸಿದರು.
ಇದಕ್ಕೂ ಮೊದಲು ಸಿರಿಧಾನ್ಯ ಮೇಳಕ್ಕೆ ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಎತ್ತಿನಗಾಡಿ ಮೂಲಕ ಕಾರ್ಯಕ್ರಮ ನಡೆಯುವ ಡಾ. ರಾಜ್ ಕುಮಾರ್ ಬಡಾವಣೆಯ ವರೆಗೆ ಮೆರವಣಿಗೆಯಲ್ಲಿ ಕರೆತಂದರು.
ಮೇಳದಲ್ಲಿ ಅಚ್ಚು ಬೆಲ್ಲ, ಕುರಿಕಾಲು ಬೆಲ್ಲ, ಬಕೆಟ್ ಬೆಲ್ಲ, ಮುದ್ದೆ ಬೆಲ್ಲ, ಪುಡಿ ಬೆಲ್ಲ, ಆಣಿ ಬೆಲ್ಲ, ಗೋಲಿ ಬೆಲ್ಲ ಸೇರಿದಂತೆ 9 ರೀತಿಯ ಬೆಲ್ಲಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಮೇಳದಲ್ಲಿ ಪ್ರದರ್ಶನ ವೀಕ್ಷಣೆ ಬಳಿಕ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಮಂಡ್ಯ ಬೆಲ್ಲ ಅಂದರೆ ಇಂಡಿಯಾಗೆ ಗೊತ್ತು. ನಮ್ಮ ಜಿಲ್ಲೆಯನ್ನ ರೈತರು ಮತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದರು. ರಾಜ್ಯ ಮಟ್ಟದ ಸಿರಿಧಾನ್ಯ ಮೇಳಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೆ.ಜಿಗೆ ₹20! ಮಾರುಕಟ್ಟೆಗೆ ಹೆಚ್ಚಿದ ಟೊಮೆಟೊ ಆವಕ; 2 ತಿಂಗಳ ನಂತರ ಬೆಲೆಯಲ್ಲಿ ಭಾರಿ ಇಳಿಕೆ