ಮಂಡ್ಯ: ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಗಣಿ ಸೇರಿದಂತೆ ಇತರೆಡೆಗಳಿಂದ ಅಕ್ರಮ ಹಣ ವಸೂಲಿಗೆ ಮುಂದಾಗಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಜಿಲ್ಲೆಯಿಂದ ಬಂದಿರುವ ಖಾಸಗಿ ವ್ಯಕ್ತಿಗಳು ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಈಗಾಗಲೇ ಅಂತಹ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಸೂಚನೆ:
ಗಣಿ ಉದ್ಯಮಿಗಳು, ಗಿರಣಿ ಮಾಲೀಕರು ಸೇರಿದಂತೆ ಇತರ ಬೇರೆ ಬೇರೆ ಉದ್ಯಮದಲ್ಲಿ ತೊಡಗಿರುವವರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಆರೋಪ ಬಂದಿವೆ. ಅಂತಹ ಆರೋಪಗಳು ಮತ್ತೆ ಕೇಳಿ ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ:
ಬೇರೆ ಜಿಲ್ಲೆಯವರು ಬಂದು ಇಲ್ಲಿ ಹಣ ವಸೂಲಿ ಮಾಡುವಂತಹದ್ದು ಕಂಡು ಬಂದಲ್ಲಿ ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ. ಯಾವುದೇ ವ್ಯಕ್ತಿಯಾಗಲಿ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಆತನನ್ನು ಈಗಾಗಲೇ ಹುಡುಕುತ್ತಿದ್ದೇವೆ. ಒಂದು ವೇಳೆ ಸಿಕ್ಕಿಬಿದ್ದಲ್ಲಿ ತಕ್ಕ ಶಾಸ್ತ್ರಿ ಖಂಡಿತ ಎಂದು ಹೇಳಿದರು.
ಎಸ್ಪಿಯವರೇ ಉತ್ತರ ಕೊಡಬೇಕು:
ಸರ್ಕಾರಿ ವಾಹನವನ್ನು ಬಳಸುತ್ತಿದ್ದಾರೆ ಜೊತೆಗೆ ಪೊಲೀಸ್ ಅತಿಥಿ ಗೃಹದಲ್ಲೇ ಇದ್ದನೆಂಬ ಮಾಹಿತಿಯೂ ಲಭ್ಯವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದಕ್ಕೆ ಎಸ್ಪಿಯವರೇ ಉತ್ತರ ಕೊಡಬೇಕು. ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮಂಗಳೂರು: ನೈತಿಕ ಪೊಲೀಸ್ ಗಿರಿ ಆರೋಪ.. ವೈರಲ್ ವಿಡಿಯೋ ಆಧರಿಸಿ ಐವರ ಬಂಧನ