ಮಂಡ್ಯ: ನಮಗಿಂತ ಜಾಸ್ತಿ ರೈತರಿಗೆ ಬಿಜೆಪಿ - ಜೆಡಿಎಸ್ ಅನ್ಯಾಯ ಮಾಡಿದೆ. ಮತ್ತು ಅವರ ಅವಧಿಯಲ್ಲಿ ಅಧಿಕ ನೀರು ಬಿಟ್ಟಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಕಾವೇರಿ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳ್ತಾ ಇದ್ದ ಹಾಗೆ ಸಚಿವ ಎನ್. ಚಲುವರಾಯಸ್ವಾಮಿ ಕೆಂಡಾಮಂಡಲವಾಗಿ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಗುರುವಾರ ಮಾತನಾಡಿದ ಅವರು, ನಾನು ರೈತರು ಹಾಗೂ ಸಂಘಟನೆಗಳ ಬಗ್ಗೆ ಮಾತನಾಡಲ್ಲ. ನಮ್ಮ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಾರೆ. ನಾವು ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದು ಅಷ್ಟೇ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವ ಅವಕಾಶವಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಎಸ್ ಅವರಿಗೆ ಕೃತಜ್ಞತೆ ಇಲ್ಲವೇ. ಮಂಡ್ಯದಲ್ಲಿ ಬಂದು ಬಿಜೆಪಿ ಜೆಡಿಎಸ್ ಏನ್ ಮಾಡ್ತಾರೆ?. ನಮ್ಮ ಗಮನಕ್ಕೆ ತರಲು ಮಂಡ್ಯದಲ್ಲಿ ರೈತರು ಇಲ್ಲವೆ. ಕುಮಾರಸ್ವಾಮಿ, ಬೊಮ್ಮಾಯಿ ದೆಹಲಿಗೆ ಹೋಗಿ ಪ್ರಧಾನಿಗಳ ಬಳಿ ಮಾತಾಡಬೇಕು. ಕಾವೇರಿ ವಿಚಾರದ ಸಮಸ್ಯೆ ಹೇಳಿ ಎರಡು ಸಿಎಂ ಕರೆಸಿ ಸಮಸ್ಯೆ ಬಗೆಹರಿಸಲು ಹೇಳಬೇಕು. ಕಾವೇರಿ ವಿಚಾರವನ್ನು ಪ್ರಧಾನಿ ಬಳಿ ಹೇಳಬೇಕು. ಅದು ಬಿಟ್ಟು ಇಲ್ಲಿ ಟಿವಿಯವರ ಮುಂದೆ ಪ್ರತಿಭಟನೆ ಮಾಡುವುದು ಸರಿಯಾ ಎಂದು ಗುಡುಗಿದರು.
ಇಲ್ಲಿ ಬಂದು ಶೂರರು ವೀರರ ರೀತಿ ಭಾಷಣ ಮಾಡುವ ಜೆಡಿಎಸ್, ಬಿಜೆಪಿಯವರು ಎಲ್ಲ ನೀರು ಬಿಟ್ಟಿದ್ದಾರೆ. ಚುನಾವಣೆಯಲ್ಲಿ ಒಂದೇ ಸಲ ಸಾಧನೆ ಮಾಡಲು ಬಿಜೆಪಿ, ಜೆಡಿಎಸ್ ಒಂದಾಗುತ್ತಾ ಇದ್ದಾರೆ. ಇವರಿಗೆ ಮಧ್ಯ ಪ್ರವೇಶ ಮಾಡಲು ಆಗುವುದಿಲ್ಲ ಎಂದರೆ ಮನೆಯಲ್ಲಿ ಇರಲಿ, ರಾಜಕಾರಣ ಯಾಕೆ ಮಾಡುತ್ತಾರೆ. ಈಗಾಗಲೇ ನಾವು ಕಾವೇರಿ ನೀರಿನ ವಿಚಾರವನ್ನು ಕೋರ್ಟ್‌ಗೆ ಹೋಗಿದ್ದೇವೆ. 12ನೇ ತಾರೀಖು CWMA ಮುಂದೆ ನೀರು ಬಿಡಲ್ಲ ಎಂದು ಹೇಳುತ್ತೇವೆ. ನಾವು ಕೂಡ ನಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಸುಮ್ಮನೆ ಕೂತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂದುವರೆದು, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿರ್ಧಾರ ಆಗಿರುವ ಬಗ್ಗೆ ಗೊತ್ತಿಲ್ಲ. ಡಿ.ಕೆ ಶಿವಕುಮಾರ್ ಬೆಂಗಳೂರಿನ ಮಂತ್ರಿ. ಅವರ ಬಳಿ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರ ನಾನು ಮಾತನಾಡುವುದಿಲ್ಲ ಎಂದರು.
RSS, ಬಜರಂಗದಳವರು ಒಳ್ಳೆಯವರೆ, ಬಿಜೆಪಿ ಇದಕ್ಕೆಲ್ಲ ಪಿತಾಮಹ: ಶಿವಮೊಗ್ಗ ಗಲಾಟೆಗೆ ಕಾಂಗ್ರೆಸ್ ಸಚಿವರು ಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಗಲಾಟೆಗಳು ಹುಟ್ಟುವುದು ಆರ್ಎಸ್ಎಸ್ ಹಿನ್ನೆಲೆಯಲ್ಲಿ. ಇದಕ್ಕೆಲ್ಲಾ ಪಿತಾಮಹ ಬಿಜೆಪಿ. ಆರ್ಎಸ್ಎಸ್, ಭಜರಂಗದಳದಲ್ಲಿ ಒಳ್ಳೆಯವರಿದ್ದಾರೆ. ರಾಜಕಾರಣದ ಲಾಭ ಪಡೆಯಲು ಬಿಜೆಪಿ ಎರಡು ಸಂಸ್ಥೆಗಳನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದರು.
ಮುಂದೆ ಅಲ್ಪ ಸಂಖ್ಯಾತರ ಮತಗಳು ಜೆಡಿಎಸ್ ಕೈ ಹಿಡಿಯಲಿಲ್ಲ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಸಾಧನೆ ಏನು ಅಂತಾ ನಿಮಗೂ, ನಮಗು ಗೊತ್ತಿದೆ. ವೋಟ್ಗಾಗಿ ಏನು ಮಾತಾಡಬೇಕು ಅದನ್ನು ಮಾತಾಡ್ತಾರೆ. ಈ ಜಿಲ್ಲೆಗೆ, ಕಾವೇರಿ ಅಚ್ಚುಕಟ್ಟಿಗೆ ಕುಮಾರಸ್ವಾಮಿ ಕೊಡುಗೆ ಏನು. ಇವರ ತಂದೆ ಕೊಡುಗೆಯನ್ನೇ ಎಷ್ಟು ಸಲ ಹೇಳ್ತಾರೆ. ಅವರ ತಂದೆ ಕೊಡುಗೆ ಕೊಟ್ಟಾಯ್ತು, ಜಿಲ್ಲೆ ಜನರು ಕೃತಜ್ಞತೆ ಸಲ್ಲಿಸಿಯಾಯ್ತು.
ಕುಮಾರಸ್ವಾಮಿ ಅವರ ವೈಯಕ್ತಿಕ ಕೊಡುಗೆ ಏನು.? ಹೆಚ್ಡಿಕೆ ದೇವೇಗೌಡ ಅವರ ಕೊಡುಗೆ ಮೇಲೆ ರಾಜಕಾರಣ ಮಾಡ್ತಿದ್ದಾರೆ ಅಷ್ಟೇ ಎಂದು ಟಾಂಗ್ ನೀಡಿದರು.
ಇನ್ನು ಸಂಕ್ರಾಂತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂಬ ಹೇಳಿಕೆಗೆ, "ರಾತ್ರಿಯೆಲ್ಲ ಕನಸು ಕಾಣೋಕೆ ಹೇಳಿ. 5 ವರ್ಷ ಸರ್ಕಾರ ಕಂಪ್ಲೀಟ್ ಮಾಡಿದ ಮೇಲೆ ಗೊತ್ತಾಗುತ್ತೆ ಎಂದರು.
ಇದನ್ನೂ ಓದಿ: ನಿಲ್ಲದ ಕಾವೇರಿ ಕಿಚ್ಚು : ಕೆಆರ್ಎಸ್ ಡ್ಯಾಂ ಮುತ್ತಿಗೆಗೆ ಹೊರಟ ಕನ್ನಡಪರ ಸಂಘಟನೆಗಳು