ಮಂಡ್ಯ: ಶ್ರೀ ಬಿಸಿಲು ಮಾರಮ್ಮ ಉತ್ಸವದ ವೇಳೆ ದೇವಿಗೆ ಬಲಿ ಕೊಡಲು ತಂದಿದ್ದ ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಕುಳಿತಿದೆ. ನಗರದ ನೂರಡಿ ರಸ್ತೆಯಲ್ಲಿ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಎದುರಿನ ಮರದ ಮೇಲೆ ಕುಳಿತಿದ್ದ ನಾಟಿ ಹುಂಜವನ್ನು ನೋಡಿದ ಜನತೆ ಆಶ್ಚರ್ಯಚಕಿತರಾದರು. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬಂತೆ ಆ ಕ್ಷಣದಲ್ಲಿ ಹುಂಜ ಸಾವಿನ ದವಡೆಯಿಂದ ಪಾರಾಗಿದೆ.
ಗಾಂಧಿನಗರದಲ್ಲಿ ಮಂಗಳವಾರ ಶ್ರೀ ಬಿಸಿಲು ಮಾರಮ್ಮ ಉತ್ಸವ ಆಚರಿಸಲಾಯಿತು. ಈ ವೇಳೆ ಭಕ್ತರೊಬ್ಬರು ಎರಡು ಕೋಳಿಗಳನ್ನು ದೇವಿಗೆ ಬಲಿ ನೀಡಲು ದೇವಾಲಯಕ್ಕೆ ತಂದಿದ್ದರು. ಒಂದನ್ನು ಬಲಿ ನೀಡುವಾಗ ಮತ್ತೊಂದು ತಪ್ಪಿಸಿಕೊಂಡು ಮರ ಏರಿತು. ಈ ದೃಶ್ಯವನ್ನು ಮೆರವಣಿಗೆಯಲ್ಲಿದ್ದ ಭಕ್ತರು ನೋಡಿ ಆಶ್ಚರ್ಯಚಕಿತರಾಗಿ ಹುಂಜವನ್ನು ನೋಡಲು ಆಕಾಶದತ್ತ ಮುಖ ಮಾಡಿದರು.
ರೆಂಬೆಯಿಂದ ರೆಂಬೆಗೆ ಜಾಗ ಬದಲಾಯಿಸಿ ಅಡ್ಡಾಡುತ್ತಿದ್ದ ಹುಂಜವನ್ನು ಇಳಿಸಲು ಕೆಲವರು ಮರ ಏರಿ ಪ್ರಯತ್ನ ಮಾಡಿದರು. ಅದನ್ನು ಉತ್ಸವದಲ್ಲಿ ಬಲಿ ಕೊಡಲು ತಂದಿದ್ದ ಭಕ್ತರು ಕೆಳಗೆ ಇಳಿಯುವುದನ್ನು ಕಾಯುತ್ತಾ ಕುಳಿತರು. ಮೂರು ತಾಸಿನ ನಂತರ ಮಳೆ ಸುರಿಯಲು ಆರಂಭವಾದರೂ ಹುಂಜ ಕೆಳಗೆ ಇಳಿಯಲಿಲ್ಲ. ಆಗ ಭಕ್ತರು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು. ಆದ್ರೆ ಈ ಹುಂಜ ಮತ್ತೆ ಭಕ್ತನ ಕೈ ಸೇರುವುದೇ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಐಎಎಸ್ ಪೂಜಾ ಸಿಂಘಾಲ್ ಇಡಿ ಪ್ರಕರಣ.. 16 ಬ್ಯಾಂಕ್ ಖಾತೆಗಳಿಂದ ₹59.97 ಕೋಟಿ ವರ್ಗಾವಣೆ