ಮಂಡ್ಯ : ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಅವರನ್ನು ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಲಂಚಕ್ಕೆ ಬೇಡಿಕೆ, ಅಕ್ಕಿ ಮೂಟೆಗಳ ನಾಪತ್ತೆ, ನಿಯಮ ಉಲ್ಲಂಘಿಸಿ ಮಗನ ಬರ್ತ್ ಡೇ ಆಚರಣೆ, ಕರ್ತವ್ಯ ಲೋಪ ಸೇರಿ 13 ಕಾರಣ ನೀಡಿ ತಹಶೀಲ್ದಾರ್ ಅವರನ್ನ ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಸ್.ರಶ್ಮಿ ಅಮಾನತು ಮಾಡಿ ಶುಕ್ರವಾರದಂದು ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರತಿಯಲ್ಲಿ ಪ್ರಮುಖವಾಗಿ 13 ಅಂಶಗಳನ್ನು ಉಲ್ಲೇಖಿಸಲಾಗಿದೆ. ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾ.8ರಂದು ನೀಡಿದ್ದ ಪ್ರಸ್ತಾವನೆಯನ್ನು ಪರಿಗಣಿಸಲಾಗಿದೆ. ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸಂಬಂಧ ದೋಷಾರೋಪಣಾ ಪಟ್ಟಿ ನೀಡಲಾಗಿದೆ.
ಅಮಾನತಿಗೆ ಪರಿಗಣಿಸಿರುವ ಅಂಶಗಳೇನು?
- ವಸತಿ ಗೃಹದ ವಿದ್ಯುತ್ ಬಾಕಿ ಮೊತ್ತ 9,493 ರೂ. ಪಾವತಿಸದೇ ಸುಳ್ಳು ಮಾಹಿತಿ ನೀಡಿ, ಚೆಸ್ಕಾಂ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು.
- ಹಳೇಬೂದನೂರು ಗ್ರಾಮದಲ್ಲಿ ನಿವೇಶನ ಹಂಚಿಕೆ ಸಂಬಂಧ ಹಣಕ್ಕೆ ಬೇಡಿಕೆ ಇಟ್ಟಿರುವ ಹಾಗೂ ಈ ಬಗ್ಗೆ ಸಲ್ಲಿಸಿರುವ ವಿವರಣೆ ಸಮಂಜಸವಾಗಿಲ್ಲ ಎನ್ನುವ ಅಂಶವನ್ನು ಪ್ರಸ್ತಾಪಿಸಲಾಗಿದೆ.
- ಕೋವಿಡ್ ಮೂರನೇ ಅಲೆ ವೇಳೆ ಮಗನ ಜನ್ಮದಿನ ಆಚರಿಸಿ ನಿಯಮ ಉಲ್ಲಂಘನೆ.
- ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೇ ಮನಬಂದಂತೆ ರಜೆ ಹಾಕಿರುವುದು.
- ಮಂಡ್ಯ ನಗರದ ಸ್ವರ್ಣಸಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ 525ಕ್ಕೂ ಹೆಚ್ಚು ಅಕ್ಕಿ ಮೂಟೆ ನಾಪತ್ತೆಯಾದರೂ ದೂರು ದಾಖಲಿಸದಿರುವುದು.
- ಗುತ್ತಲು ಗ್ರಾಮದ ಸ.ನಂ. 54ರಲ್ಲಿ 11.21 ಎ ಗುಂಟೆ, ಸರ್ಕಾರಿ ಖರಾಬಿನ 0.30 ಗುಂಟೆ ಜಮೀನು ಸಂಬಂಧ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ಕಾರಿ ವಕೀಲರನ್ನು ಭೇಟಿ ಮಾಡಿ ಮಾಹಿತಿ ಒದಗಿಸದಿರುವುದು.
- ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ.
- ಪ್ರಕರಣ ದಾಖಲಾಗುವುದರ ಜೊತೆಗೆ ಮತ್ತೊಮ್ಮೆ ಅಫಿಡೆವಿಟ್ ಸಲ್ಲಿಸುವ ಸಂದರ್ಭ ಸೃಷ್ಟಿಸಿರುವುದು.
- ಚುನಾವಣಾ ಕರ್ತವ್ಯದ ಬಗ್ಗೆ ನಿರಾಸಕ್ತಿ ತೋರಿರುವುದು.
- ಸಕಾಲದಲ್ಲಿ ಭೂ ಕಂದಾಯದ ಅರ್ಜಿ ವಿಲೇವಾರಿ ಮಾಡದಿರುವುದು.
- ಎಸ್ಸಿ, ಎಸ್ಟಿ ಕಾಯ್ದೆ 1978ರಡಿ ಮಂಜೂರಾಗಿರುವ ಜಮೀನುಗಳ ನೋಂದಣಿ ಹಾಗೂ ಪರಭಾರೆ ನಿಯಂತ್ರಿಸುವ ಸಂಬಂಧ ತಂತ್ರಾಂಶದಲ್ಲಿ ಆಗಿರುವ ಸಮಸ್ಯೆ ಕುರಿತು ದೃಢೀಕರಣ ನೀಡುವ ಬಗ್ಗೆ ಕ್ರಮ ವಹಿಸಿಲ್ಲ.
- ಮುಟೇಷನ್ ಪ್ರಕರಣಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುತ್ತಿಲ್ಲ. ತಾಲೂಕು ಕಚೇರಿಯ ಕಾರ್ಯ ನಿರ್ವಹಣೆಯಲ್ಲಿ ಹಲವು ದೋಷ ಕಂಡುಬಂದಿರುವುದು, ಇತ್ಯಾದಿ.
ಇದನ್ನೂ ಓದಿ: ಬಿಎಂಟಿಸಿ ಬಸ್ಗೆ ಗುದ್ದಿದ ಕಾಡಾನೆ.. ಬಸ್ ಮುಂಭಾಗ ನಜ್ಜುಗುಜ್ಜು
ಈ ಆರೋಪಗಳ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.