ಮಂಡ್ಯ: ತಾಲೂಕಿನ ಗಂಟಗೌಡನಹಳ್ಳಿ-ದ್ಯಾಪಸಂದ್ರ ಸಮೀಪ ನಡೆದಿದ್ದ ದರೋಡೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗು ವಾಹನ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಉದಯಗಿರಿ ಮೂಲದ ರಮೇಶ್, ವರುಣ್‌ಗೌಡ, ಪುನೀತ್, ಪ್ರಕಾಶ್, ರಾಜು ಮತ್ತು ಕೈಲಾಶ್‌ಕುಮಾರ್ ಬಂಧಿತರು. 3 ಕೆಜಿ 100 ಗ್ರಾಂ ಚಿನ್ನಾಭರಣ, 50 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬೈಕ್ ಅನ್ನು ಜಪ್ತಿ ಮಾಡಲಾಗಿದೆ.
ಏನಿದು ಪ್ರಕರಣ?: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಮಾಹಿತಿ ನೀಡಿ, ಮೈಸೂರಿನ ವ್ಯಾಪಾರಿ ಲಲಿತ್ ಎಂಬುವರು ಜ್ಯುವೆಲ್ಲರಿ ಅಂಗಡಿಗಳಿಗೆ ಚಿನ್ನಾಭರಣ ಒದಗಿಸುವ ವೃತ್ತಿ ಮಾಡುತ್ತಾರೆ. ಏ.14ರಂದು ಲಲಿತ್ ಮತ್ತು ಮಾಧುರಾಂ ಅವರು ಕಾರಿನಲ್ಲಿ ಚಿನ್ನದ ಮೂಗುತಿ, ಉಂಗುರವನ್ನು ಜಕ್ಕನಹಳ್ಳಿ, ಚೀಣ್ಯ, ಬಸರಾಳು ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾರೆ. ನಂತರ ಕೆರಗೋಡು ಗ್ರಾಮಕ್ಕೆ ಬರುವ ಮಾರ್ಗಮಧ್ಯೆ ಗಂಟಗೌಡನಹಳ್ಳಿ-ದ್ಯಾಪಸಂದ್ರ ಸಮೀಪ ಹಿಂದಿನಿಂದ ಬೈಕ್‌ನಲ್ಲಿ ಇಬ್ಬರು ಹಾಗೂ ಎದುರಿನಿಂದ ನಾಲ್ವರು ಕಾರಿನಲ್ಲಿ ಬಂದು ಅಡ್ಡಹಾಕಿದ್ದರು.
ನಂತರ ಸುತ್ತಿಗೆಯಿಂದ ಕಾರಿನ ಗ್ಲಾಸ್‌ಗಳನ್ನು ಒಡೆದು ಮಾಧುರಾಂ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ತುಂಬಿದ ಸೂಟ್‌ಕೇಸ್‌ಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡಸಲಾಗಿತ್ತು ಎಂದರು.
ಇದನ್ನೂ ಓದಿ: ಕೆಲಸ ಮಾಡ್ತಿದ್ದ ವೇಳೆ ಸ್ಫೋಟಗೊಂಡ ಲ್ಯಾಪ್ಟಾಪ್; ಯುವತಿಗೆ ಗಂಭೀರ ಗಾಯ
ಆರೋಪಿಗಳನ್ನು ಬಂಧಿಸಿದಾಗ, ವೃತ್ತಿ ವೈಷಮ್ಯದಿಂದ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಲಲಿತ್ ಅವರ ಅಂಗಡಿಯಲ್ಲಿ ಸುಮಾರು 14 ವರ್ಷ ಕೆಲಸ ಮಾಡಿ ನಂತರ ಕಾರಣಾಂತರಗಳಿಂದ ಕೆಲಸ ಬಿಟ್ಟಿದ್ದ ವ್ಯಕ್ತಿಯೇ ಪ್ರಮುಖ ಆರೋಪಿ ಎಂದು ಗೊತ್ತಾಗಿದೆ. ಈತನಿಗೆ ಸಹಕರಿಸಿದ ಆಟೋ ಚಾಲಕರು, ಕೂಲಿ ಕಾರ್ಮಿಕ ಹಾಗೂ ಪ್ರಮುಖ ಆರೋಪಿ ಜತೆಗೆ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸೇರಿದಂತೆ ಆರು ಜನರನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದರು.