ಮಂಡ್ಯ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಮಂಡ್ಯ ಮಿಲ್ಕ್ ಯೂನಿಯನ್ ಲಿಮಿಟೆಡ್ (ಮನ್ ಮುಲ್ ) ಎದುರು ಪ್ರತಿಭಟನೆ ನಡೆಸಿದರು.
ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೆ ಒಳಪಡಿಸಬೇಕು, ನೇಮಕಾತಿ ಪಾರದರ್ಶಕವಾಗಿರಬೇಕು. ಆಡಳಿತ ಮಂಡಳಿ ನಡೆಸಿರುವ ಅಕ್ರಮಗಳನ್ನು ರಾಜ್ಯ ಸರ್ಕಾರ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು, ಕೂಡಲೇ ಎಲ್ಲಾ ಸಂಘಗಳಿಗೆ ಮತದಾನದ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ರಸ್ತೆಗೆ ಹಾಲು ಚೆಲ್ಲಿ ಆಕ್ರೋಶ ಹೊರಹಾಕಿದರು. ಬಳಿಕ ಮನ್ಮುಲ್ ಎದುರು ಧರಣಿ ಕುಳಿತು, ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಒಕ್ಕೂಟದ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.