ಮಂಡ್ಯ: ಜಿಲ್ಲೆಯ ಕಬ್ಬು ಬೆಳೆಗಾರರ ರಕ್ಷಣೆಗೆ ಜಿಲ್ಲಾಡಳಿತ ತುರ್ತು ಕ್ರಮಕ್ಕೆ ಮುಂದಾಗಿದ್ದು, ಎರಡು ಕಾರ್ಖಾನೆಗಳು ಮುಚ್ಚಿರುವುದರಿಂದ ರೈತರ ರಕ್ಷಣೆಗೆ ಖುದ್ದು ಜಿಲ್ಲಾಧಿಕಾರಿಯೇ ಅಖಾಡಕ್ಕೆ ಧುಮುಕಿದ್ದಾರೆ.
ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಜೊತೆ ಸಭೆ ನಂತರ ಇತರ ಖಾಸಗಿ ಕಾರ್ಖಾನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆಯವರು ಪ್ರಸ್ತುತ ಸಾಲಿನ ಮಂಡ್ಯ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಕಬ್ಬನ್ನು ನುರಿಸಲು ಸಾಧ್ಯವಿಲ್ಲವೆಂದು ತಿಳಿಸಿರುವ ಹಿನ್ನೆಲೆಯಲ್ಲಿ, ಕಾರ್ಖಾನೆ ವ್ಯಾಪ್ತಿಯಲ್ಲಿ ಬರುವ ರೈತರು ಬೆಳೆದಿರುವ ಕಬ್ಬನ್ನು ಇತರೆ ಹತ್ತಿರದ ಕಾರ್ಖಾನೆಗೆ ಸರಬರಾಜು ಮಾಡುವಂತೆ ಡಿಸಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಸಕ್ಕರೆ ಕಾರ್ಖಾನೆಯವರು ಮೈಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಕಬ್ಬನ್ನು ಅರೆಯಲು ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ ಎಂದು ಡಿಸಿ ಡಾ. ವೆಂಕಟೇಶ್ ತಿಳಿಸಿದ್ದು, ಸಭೆ ನಂತರ ಮದ್ದೂರು ತಾಲ್ಲೂಕಿನ ಕೆ.ಎಂ. ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಭೇಟಿ ಪರಿಶೀಲನೆ ಮಾಡಿದ್ದು, ಮೈಷುಗರ್ ವ್ಯಾಪ್ತಿಗೆ ಬರುವ ಶೇಕಡ 20 ರಷ್ಟು ರಷ್ಟು ಕಬ್ಬನ್ನು ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯು ಅರೆಯಲು ತೆಗೆದುಕೊಂಡಿದ್ದು, ರೈತರ ಹಿತದೃಷ್ಟಿಯಿಂದ ಕಬ್ಬನ್ನು ವ್ಯವಸ್ಥಿತವಾಗಿ ಅರೆಯುವಂತೆ ಸೂಚಿಸಿದರು.
ರೈತರಿಗೆ ನೀಡಬೇಕಾಗಿರುವ ಬಾಕಿ 7 ಕೋಟಿ ಹಣವನ್ನು ಕೂಡಲೇ ಪಾವತಿಸಲು ಅಗತ್ಯ ಕ್ರಮವಹಿಸುವಂತೆ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ್ದು, ಹೆಮ್ಮಿಗೆ ಗ್ರಾಮದ ಆಲೆಮನೆಗೆ ಭೇಟಿ ನೀಡಿ ಸ್ಚಚ್ಚತೆ ಕಾಪಾಡುವಂತೆ ತಿಳಿಸಿ, ರಾಸಾಯನಿಕ ವಸ್ತುಗಳನ್ನು ಬಳಸದಂತೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.