ಮಂಡ್ಯ: ಮುಂಬೈನಿಂದ ಖರ್ಜೂರ ಸಾಗಿಸುವ ಟ್ರಕ್‌ನಲ್ಲಿ ಬಂದಿದ್ದ ಕೊರೊನಾ ಸೋಂಕಿತ, ಹಲವರ ಜೊತೆ ಸಂಪರ್ಕ ಹೊಂದಿದ್ದ. ಜಿಲ್ಲೆಯಿಂದ ಹಾಸನಕ್ಕೆ ತೆರಳಿ ಬಳಿಕ ಅಲ್ಲಿಂದ ಊರಿಗೆ ಆಗಮಿಸಿದ್ದಾನೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ರೋಗಿ P-505ರ ಟ್ರಾವೆಲ್ ಹಿಸ್ಟರಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬೈನ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಏಪ್ರಿಲ್ 22ರಂದು ನಾಗಮಂಗಲಕ್ಕೆ ಬಂದಿದ್ದ. ಏಪ್ರಿಲ್ 24ರಂದು ಆತನಿಗೆ ಪರೀಕ್ಷೆ ಮಾಡಲಾಗಿದ್ದು, ಇಂದು ವರದಿ ಪಾಸಿಟಿವ್ ಬಂದಿದೆ ಎಂದರು.
ಟ್ರಾವೆಲ್ ಹಿಸ್ಟರಿ:
ಮುಂಬೈನಿಂದ ಖರ್ಜೂರ ಸಾಗಿಸುವ ಕ್ಯಾಂಟರ್ನಲ್ಲಿ ಪ್ರಯಾಣ ಬೆಳೆಸಿ, ಉಡುಪಿಗೆ ಬಂದು ಪೆಟ್ರೋಲ್ ಬಂಕ್ ಬಳಿ ಸ್ನಾನ ಮಾಡಿ, ತಿಂಡಿ ತಿಂದಿದ್ದ. ಅದೇ ವಾಹನದಲ್ಲಿ ಚನ್ನರಾಯಪಟ್ಟಣಕ್ಕೆ ಬಂದಿದ್ದ. ಲಾಕ್ಡೌನ್ ಇದ್ದರೂ ಅದನ್ನು ಉಲ್ಲಂಘನೆ ಮಾಡಿ ಅಲ್ಲಿಂದ ಬಾಮೈದನ ಕಾರಿನಲ್ಲಿ ಮನೆಗೆ ಬಂದಿದ್ದಾನೆ. ಸೋಂಕಿತ ವ್ಯಕ್ತಿಯ ಜೊತೆ ಬಾಮೈದ, ಬಾಮೈದನ ಹೆಂಡತಿ ಹಾಗೂ ಮಕ್ಕಳು ಸಂಪರ್ಕದಲ್ಲಿದ್ದರು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ರೋಗಿ P-505 ತಮ್ಮ ಮನೆಯಲ್ಲಿ ಈ ಹಿಂದೆ ವಾಸವಿದ್ದವರನ್ನು ಖಾಲಿ ಮಾಡಿಸಿ ಇವರು ಮತ್ತು ಇವರ ಪತ್ನಿ ಇದ್ದಾರೆ. ಬಾಮೈದ ಅವರ ಕುಟುಂಬದ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿದ್ದಾರೆ. ಟ್ರಕ್ ಡ್ರೈವರ್ ಮತ್ತು ಇನ್ನೊಬ್ಬ ವ್ಯಕ್ತಿ ಚನ್ನರಾಯಪಟ್ಟಣದವರು. ಇವರನ್ನು ಹಾಸನ ಜಿಲ್ಲಾಧಿಕಾರಿ ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದರು.
ಮುಂಬೈನಿಂದ ಸಾವಿರಾರು ಜನರು ಜಿಲ್ಲೆಗೆ ಬಂದಿರುವ ವಿಚಾರವಾಗಿ ನಮ್ಮ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದಾರೆ. ಮುಂಬೈ ಮತ್ತು ಬೆಂಗಳೂರಿನಿಂದ ಯಾರು ಬಂದಿದ್ದಾರೋ ಅವರಿಗೆ ಪ್ರಥಮ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.