ಮಂಡ್ಯ: ಶಿಂಷಾ ನದಿಯ ಬಳಿ ಜ. 2 ರಂದು ನಡೆದ ಮದ್ದೂರು ತಾಲ್ಲೂಕಿನ ನವಿಲೆಯ ವಕೀಲ ರವೀಂದ್ರ ಕೊಲೆ ಪ್ರಕರಣದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನವಿಲೆ ಗ್ರಾಮದ ನಿವಾಸಿಗಳಾದ ಎನ್.ಟಿ. ರಂಗಸ್ವಾಮಿ (33), ಸಂತೋಷ್ (32), ರಂಗಸ್ವಾಮಿ (35), ಹರಕನಹಳ್ಳಿ ಗ್ರಾಮದ ಅಭಿರಾಜ, ನಾಗರಾಜು (20) ಹಾಗೂ ಓರ್ವ ಬಾಲಕ ಬಂಧಿತರಾದವರು. ಕೊಲೆಯಾದ ವಕೀಲ ರವೀಂದ್ರ ಅವರನ್ನು 2017 ರಲ್ಲಿ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಜಮೀನು ವಿವಾದದ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಬಿಎಸ್‌ಪಿ ಮುಖಂಡ ಎನ್ ಕೆ ರವೀಂದ್ರ ಅನುಮಾನಾಸ್ಪದ ಸಾವು
ಬಂಧಿತರಲ್ಲಿ ಕೆಲವರು ಸವರ್ಣೀಯರಾಗಿದ್ದು, ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಜೆ. ಪೃಥ್ವಿ ನೇತೃತ್ವದಲ್ಲಿ ಸಿಪಿಐ ಕೆ.ಆರ್. ಪ್ರಸಾದ್, ಪಿಎಸ್‌ಐಗಳಾದ ಪುರುಷೋತ್ತಮ, ಮೋಹನ್ ಡಿ. ಪಟೇಲ್ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಕಾರ್ಯಾಚರಣೆ ತಂಡದಲ್ಲಿದ್ದರು.