ಮಂಡ್ಯ: ಎರಡನೇ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗಿದೆ. ಆದರೆ ಟಿಕೆಟ್ ಹಂಚಿಕೆ ಮಾಡಿರುವ ವರಿಷ್ಠರ ನಿರ್ಧಾರದ ವಿರುದ್ಧ ಆಕಾಂಕ್ಷಿತರಿಂದ ಅಸಮಾಧಾನ ವ್ಯಕ್ತವಾಗಿದೆ. ಇದರೊಂದಿಗೆ ಭಿನ್ನಮತೀಯರು ಪ್ರತಿಭಟನೆ ಜೊತೆಗೆ, ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದಾರೆ.
ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ 16 ಜನ ಆಕಾಂಕ್ಷಿತರಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಪಟ್ಟಿಯಲ್ಲಿ ಕಳೆದ ಬಾರಿ ಪರಾಭವಗೊಂಡಿದ್ದ ಪಿ.ರವಿಕುಮಾರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮರು ಆಯ್ಕೆ ಮಾಡಿದೆ. ಇದು ಉಳಿದ ಟಿಕೆಟ್ ಆಕಾಂಕ್ಷಿತರ ಅಸಮಾಧಾನಕ್ಕೆ ಕಾರಣವಾಗಿದೆ.
ಗುರುವಾರ ಕೀಲಾರ ರಾಧಾಕೃಷ್ಣ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಶುಕ್ರವಾರ ಮತ್ತೆ ಕೀಲಾರ ರಾಧಾಕೃಷ್ಣ ನಿವಾಸದಲ್ಲಿ ಸಭೆ ನಡೆಸಿದ ಬೆಂಬಲಿಗರು ವರಿಷ್ಠರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೀಲಾರ ರಾಧಾಕೃಷ್ಣ ಅವರನ್ನು ಭೇಟಿಯಾಗಿ ಭಿನ್ನಮತ ತಣಿಸಲು ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಅವರಿಗೆ ಪ್ರತಿಭಟನೆ ಬಿಸಿ ಎದುರಾಯಿತು. ರವಿಕುಮಾರ್ ಅವರನ್ನು ಸುತ್ತುವರಿದ ಬೆಂಬಲಿಗರು ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿ, ವರಿಷ್ಠರು ಕೂಡಲೇ ಅಭ್ಯರ್ಥಿಯನ್ನು ಬದಲಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಟಿಕೆಟ್ ವಂಚಿತ ಕೀಲಾರ ರಾಧಾಕೃಷ್ಣ ಮಾತನಾಡಿ, ನನ್ನನ್ನೇ ನಂಬಿರುವ ನಗರಸಭೆ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿನಿಗಳ ಹಿತದೃಷ್ಟಿಯಿಂದ ಇಲ್ಲಿ ನಡೆದ ತೀರ್ಮಾನಗಳ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ನಾನು ಯಾವುದೇ ಷರತ್ತು ವಿಧಿಸಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರಲಿಲ್ಲ. ಕಳೆದ 7 ವರ್ಷಗಳಿಂದ ಕ್ಷೇತ್ರದಲ್ಲಿ ನನ್ನ ಶಕ್ತಿ ಮೀರಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ನಾವು ಮೂಲತಃ ಕಾಂಗ್ರೆಸ್‌ನವರು ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಜೆಡಿಎಸ್ ಸೇರಬೇಕಾಯಿತು. ಬಳಿಕ 2020 ರಿಂದ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.
ಕೀಲಾರ ರಾಧಾಕೃಷ್ಣ ಬೆಂಬಲಿಗರ ಪ್ರತಿಭಟನೆ ಒಂದೆಡೆಯಾದರೆ, ಮತ್ತೊಂದೆಡೆ ಮೂಲ ಕಾಂಗ್ರೆಸ್ಸಿಗರು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದರು. ಸಭೆಯಲ್ಲಿ ಹಲವು ಟಿಕೆಟ್ ಆಕಾಂಕ್ಷಿತರು, ಮೂಲ ಕಾಂಗ್ರೆಸ್ಸಿಗರು ಪಾಲ್ಗೊಂಡು ಪಿ.ರವಿಕುಮಾರ್ ಆಯ್ಕೆಯನ್ನು ಖಂಡಿಸಿದರು.
ಕಳೆದ ಬಾರಿಯೂ ಗಣಿಗ ರವಿಕುಮಾರ್‌ಗೆ ಟಿಕೆಟ್ ನೀಡಲಾಗಿತ್ತು. ಸರಿಯಾದ ರೀತಿಯಲ್ಲಿ ಚುನಾವಣೆ ಮಾಡದೆ ಕ್ಷೇತ್ರದಿಂದ ಪಲಾಯನ ಮಾಡಿದ್ದರು. ಇದರಿಂದ ಪಕ್ಷಕ್ಕೆ ಅವಮಾನ ಆಗಿದೆ. ಈಗಲೂ ಗಣಿಗ ರವಿಕುಮಾರ್‌ಗೆ ಟಿಕೆಟ್ ನೀಡಲಾಗಿದೆ. ಏ.10 ರಂದು ಮತ್ತೊಂದು ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ. ಅಷ್ಟರೊಳಗೆ ಅಭ್ಯರ್ಥಿ ಬದಲಿಸಿ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಮೂಲ ಕಾಂಗ್ರೆಸ್ಸಿಗರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ:ಅಭಿಮಾನಿಗಳಿಗೆ ಭಾವುಕ ಪತ್ರ ಬರೆದ ದತ್ತಾ; ಅವರು ಇಂಟರ್‌ನ್ಯಾಷನಲ್ ಪಕ್ಷ ಸೇರ ಹೊರಟವರೆಂದ ಹೆಚ್‌ಡಿಕೆ